ಗಂಡ – ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗಿದೆ ಈ ಘಟನೆ. ಕೇರಳ ಹಾಗೂ ತಮಿಳುನಾಡಿನ ಗಡಿ ಸಮಸ್ಯೆ ಅನೇಕ ವರ್ಷಗಳಿಂದಲೇ ನಡೆಯುತ್ತಲೇ ಇದೆ. ಈಗ ಇದೇ ಸಮಸ್ಯೆ ಅಲ್ಲಿನ ಕಾಡಾನೆಯ ಜೀವಕ್ಕೆನೇ ಕುತ್ತು ತಂದಿಟ್ಟಿದೆ.
ಅಸಲಿಗೆ ತಮಿಳುನಾಡು-ಕೇರಳ ಗಡಿಯಲ್ಲಿರುವ ಆನೈಕಟ್ಟಿ ನದಿ ಪ್ರದೇಶದಲ್ಲಿ ಆನೆಯೊಂದರ ಆರೋಗ್ಯ ಹದಗೆಟ್ಟಿದೆ. ಆ ಆನೆ ನೋವಿನಿಂದ ಒದ್ದಾಡುತ್ತಿದ್ದರೂ ಎರಡು ರಾಜ್ಯದವರು ಮಾತ್ರ ಚಿಕಿತ್ಸೆಗೆ ಮುಂದಾಗುತ್ತಿಲ್ಲ ಕಾರಣ ಗಡಿ ಸಮಸ್ಯೆ. ಆ ಆನೆ ತಮ್ಮ ರಾಜ್ಯಕ್ಕೆ ಸಂಬಂಧಿಸಿಲ್ಲ ಅಂತ ಕೇರಳ ಅಧಿಕಾರಿಗಳು ಹೇಳುತ್ತಿದ್ಧಾರೆ. ತಮಿಳುನಾಡಿನ ಅಧಿಕಾರಿಗಳು ಸಹ ಆ ಆನೆಗೂ ತಮಗೂ ಸಂಬಂಧವೇ ಇಲ್ಲ ಅಂತ ಹೇಳುತ್ತಿದ್ದಾರೆ. ಅಧಿಕಾರಿಗಳ ಈ ಜಟಾಪಟಿಯಲ್ಲಿ ಆನೆಯ ನೋವಿಗೆ ಸ್ಪಂದಿಸಿ, ಚಿಕಿತ್ಸೆ ಕೊಡುವವರೇ ಯಾರೂ ಇಲ್ಲ.
ಕೆಲ ದಿನಗಳಿಂದ ಆನೆ ಅನಾರೋಗ್ಯದಿಂದ ಬಳಲುತ್ತಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಸೊರಗಿದೆ. ನಿಂತು ಓಡಾಡುವುದಕ್ಕೂ ಪರದಾಡ್ತಿದೆ. ಆನೈಕಟ್ಟಿಯ ಸಣ್ಣ ನದಿಯ ಬಳಿ ಆನೆ ಪ್ರಜ್ಞೆ ತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ಧಾರೆ. ಆದರೆ ಈ ಆನೆಯ ಓಡಾಟವೇ ಅಧಿಕಾರಿಗಳಿಗೆ ಈಗ ಫುಲ್ ಕನ್ಫ್ಯೂಸ್ ಮಾಡಿ ಹಾಕಿದೆ. ಏಕೆಂದರೆ ಈ ಪ್ರದೇಶವು ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಈ ಆನೆ ಒಮ್ಮೆ ಕೇರಳದ ಗಡಿಯಲ್ಲಿ ಕಾಣಿಸಿಕೊಂಡರೆ, ಇನ್ನೊಮ್ಮೆ ತಮಿಳುನಾಡಿನ ಗಡಿಯಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ ಎರಡು ರಾಜ್ಯಗಳ ಅಧಿಕಾರಿಗಳು ಆನೆಗೆ ಚಿಕಿತ್ಸೆ ನೀಡದೇ ನಿರ್ಲಕ್ಷ್ಯವಹಿಸುತ್ತಿದ್ಧಾರೆ.
ಅಧಿಕಾರಿಗಳ ಈ ವರ್ತನೆಯಿಂದ ಬೇಸರ ವ್ಯಕ್ತಪಡಿಸಿರೋ ಪ್ರಾಣಿದಯಾ ಸಂಘಟನೆಗಳ ಪ್ರತಿನಿಧಿಗಳು ಯಾವುದೋ ಒಂದು ರಾಜ್ಯದ ಅಧಿಕಾರಿಗಳು ಚಿಕಿತ್ಸೆ ನೀಡಬೇಕಾಗಿ ಆಗ್ರಹಿಸಿದ್ದಾರೆ. ಇದೀಗ ಎರಡು ರಾಜ್ಯದ ಅಧಿಕಾರಿಗಳು ಆನೆಗೆ ಚಿಕಿತ್ಸೆ ನೀಡುವುದಕ್ಕೆ ಮುಂದಾಗಿದ್ದಾರೆ. ಇದೇ ಕೆಲಸ ಮೊದಲೇ ಮಾಡಿದ್ದರೆ ಆನೆ ಇಷ್ಟು ನೋವು ಸಂಕಟ ಪಡುತ್ತಿರಲಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ಧಾರೆ.