ಬೆಂಗಳೂರು: ಚಿಕಿತ್ಸೆ ಅಗತ್ಯವಿದ್ದ ಮಗುವಿಗೆ ಕೇವಲ ಎರಡು ಗಂಟೆಯೊಳಗೆ ವ್ಯವಸ್ಥೆ ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದ ಸಿಎಂ ಅವರಿಗೆ ಹಸುಗೂಸನ್ನು ಎತ್ತಿಕೊಂಡು ಕಾಯುತ್ತಿದ್ದ ಶಂಕ್ರಮ್ಮ ಅವರು ಕಂಡಿದ್ದಾರೆ. ಅವರ ಸಮಸ್ಯೆ ಕುರಿತು ವಿಚಾರಿಸಿದಾಗ, ಶಂಕ್ರಮ್ಮನ ಮಗು ಕೃಷ್ಣವೇಣಿ ದೃಷ್ಟಿ ದೋಷ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಶಂಕ್ರಮ್ಮನ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಮಗು ಕೃಷ್ಣವೇಣಿಯ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದಾರೆ. ಎರಡು ತಾಸಿನೊಳಗೆ ಮುಖ್ಯಮಂತ್ರಿ ಪರಿಹಾರ ನಿಧಿ ಶಾಖೆಯಿಂದ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ಪತ್ರ ಬರೆದು, ಕೃಷ್ಣವೇಣಿಯ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮಗುವಿಗೆ ಸಂಪೂರ್ಣವಾದ ಚಿಕಿತ್ಸೆ ನೀಡಿದ ನಂತರ ಸರ್ಕಾರಕ್ಕೆ ಬಿಲ್ ಗಳನ್ನು ಸಲ್ಲಿಸುವಂತೆ ಪತ್ರದಲ್ಲಿ ಆಸ್ಪತ್ರೆಗೆ ಸೂಚಿಸಲಾಗಿದೆ.