ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ನಿದ್ರೆಯ ಗುಂಗು ಅಥವಾ ಕತ್ತಲಲ್ಲಿ ಇಳಿಯಬೇಕಾದ ಸ್ಥಳ ಬಿಟ್ಟು ಮುಂದೆ ಪ್ರಯಾಣ ಸಾಗಿಬಿಟ್ಟರೆ ಎಂಬ ಆತಂಕ ಅನೇಕರಲ್ಲಿರುತ್ತದೆ. ಇಳಿಯಬೇಕಾದ ಸ್ಥಳಬಿಟ್ಟು ಮುಂದಿನ ನಿಲ್ದಾಣದಲ್ಲಿ ಇಳಿದವರು ಸಾಕಷ್ಟು ಮಂದಿ ಇದ್ದೇ ಇರುತ್ತಾರೆ.
ಇಂತಹ ಸಂದರ್ಭ ಬರಬಾರದು ಎಂಬ ಕಾರಣಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ವೇಕಪ್ ಕಾಲ್ ಅಲರ್ಟ್ ಸೇವೆ ನೀಡುತ್ತಿದೆ.
ಇಳಿಯಬೇಕಾದ ಸ್ಥಳ ತಲುಪಲು 20 ನಿಮಿಷ ಮುಂಚಿತವಾಗಿ ಎಸ್ಎಂಎಸ್ ಮೂಲಕ ಅಲರ್ಟ್ ಮಾಡುವ ಸೇವೆಯು ಇದಾಗಿದೆ. ರಾತ್ರಿ 11ರಿಂದ ಬೆಳಗ್ಗೆ 7ರ ಅವಧಿಗೆ ಈ ಸೇವೆ ಲಭ್ಯ. ಇದಕ್ಕೆ ಇಂಟರ್‌ನೆಟ್ ಕೂಡ ಅಗತ್ಯವಿಲ್ಲ.
139ಗೆ ಡಯಲ್ ಮಾಡಿ, ಮೆನು ವಿವರಣೆ ನೀಡುವಾಗ ಆಪ್ಷನ್ 7ನ್ನು ಕ್ಲಿಕ್ ಮಾಡಬೇಕು. ವೇಕಪ್ ಕಾಲ್ ಸೇವೆ ಬಳಸಲು 2ನೇ ನಂಬರ್ ಕ್ಲಿಕ್ ಮಾಡಬೇಕು.
ಮುಂದಿನ ಹಂತದಲ್ಲಿ ಹತ್ತು ಡಿಜಿಟ್ ಪಿ ಎನ್ ಆರ್ ಸಂಖ್ಯೆ ದಾಖಲಿಸಿ, ಖಚಿತತೆಗಾಗಿ ಸಂಖ್ಯೆ ಒಂದನ್ನು ಒತ್ತಬೇಕು.
ಬಳಿಕ ಈ ಸೇವೆ ಚಾಲೂ ಆಗಿರುವ ಬಗ್ಗೆ ಖಚಿತತೆ ತಿಳಿಸಲು ಅಲರ್ಟ್ ಸಂದೇಶ ಬರಲಿದೆ.
ಈ ಸೇವೆ ಆಕ್ಟಿವ್ ಮಾಡಿಕೊಂಡು ನಿಶ್ಚಿಂತೆಯಿಂದ ಪ್ರಯಾಣಿಕರು ನಿದ್ರೆಗೆ ಜಾರಬಹುದು.