ದೇಶದಲ್ಲಿ ಕೊರೊನಾ ಇನ್ನೂ ಮುಗಿದಿಲ್ಲ. ಲಾಕ್ ಡೌನ್, ಕೊರೊನಾದಿಂದ ಬೇಸತ್ತ ಜನರು ಹೊರಗೆ ಪ್ರಯಾಣ ಬೆಳೆಸಲು ಶುರು ಮಾಡಿದ್ದಾರೆ. ಪ್ರವಾಸಕ್ಕೆ ತೆರಳುವ ಪ್ರಯಾಣಿಕರು, ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಕೊರೊನಾದಿಂದಾಗಿ ಅನೇಕ ಸಂಗತಿಗಳಲ್ಲಿ ಬದಲಾವಣೆಯಾಗಿದೆ. ಮೊದಲಿನಂತೆ ಎಲ್ಲ ವಸ್ತುಗಳು ಸಿಗಲು ಸಾಧ್ಯವಿಲ್ಲ. ಹಾಗಾಗಿ ಪ್ರವಾಸ ಕೈಗೊಳ್ಳುವ ಮೊದಲು ಮುಖ್ಯ ವಸ್ತುಗಳನ್ನು ಪ್ಯಾಕಿಂಗ್ ಮಾಡಬೇಕು.
ಪ್ರಯಾಣಕ್ಕೆ ಮೊದಲು ಆಹಾರ ಮತ್ತು ಪಾನೀಯಗಳನ್ನು ಬ್ಯಾಗ್ ಗೆ ಹಾಕಿಕೊಳ್ಳಿ. ಇದ್ರಿಂದ ಅನೇಕ ರೀತಿಯ ಸಮಸ್ಯೆ ಕಡಿಮೆ ಮಾಡಬಹುದು. ಹೊಟೇಲ್ ಗೆ ಹೋಗುವುದನ್ನು ತಪ್ಪಿಸಬಹುದು. ಇದ್ರಿಂದ ಕೊರೊನಾ ಅಪಾಯ ಸ್ವಲ್ಪ ತಪ್ಪಿದಂತೆ.
ವಿಮಾನ ಪ್ರಯಾಣ ಬೆಳೆಸುವ ವೇಳೆ ನೀರು, ಎಳ ನೀರನ್ನು ಬ್ಯಾಗ್ ನಲ್ಲಿಟ್ಟುಕೊಳ್ಳಿ. ರೈಲು ಅಥವಾ ಬಸ್ ನಲ್ಲಿ ಪ್ರಯಾಣ ಬೆಳೆಸುವ ವೇಳೆ ಮೂರರಿಂದ ನಾಲ್ಕು ಬಾಟಲಿ ನೀರನ್ನು ಇಟ್ಟುಕೊಳ್ಳಿ. ನಿಂಬೆ ಪಾನಕ, ಎಳ ನೀರನ್ನು ತೆಗೆದುಕೊಂಡು ಹೋಗಿ. ಪ್ರತಿ ಒಂದು ಗಂಟೆಗೊಮ್ಮೆ ನೀರು ಕುಡಿಯಿರಿ. ಇದ್ರಿಂದ ದೇಹದಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಇತ್ಯಾದಿಗಳ ಕೊರತೆ ಇರುವುದಿಲ್ಲ.
ಪ್ರಯಾಣದ ವೇಳೆ ಬಿಸ್ಕತ್ತುಗಳು, ಚಿಪ್ಸ್ ಇತ್ಯಾದಿಗಳನ್ನು ಒಯ್ಯುತ್ತೇವೆ. ಆದರೆ ಬಿಸ್ಕತ್ತಿನ ಬದಲು ಪಾಪ್‌ಕಾರ್ನ್, ಬಾದಾಮಿ, ಕಡಲೆಕಾಯಿ, ಗೋಡಂಬಿ ಇತ್ಯಾದಿಗಳನ್ನು ಒಯ್ಯಿರಿ. ಅದು ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ.
ದೊಡ್ಡ ಪ್ಯಾಕ್ ನಲ್ಲಿ ಆಹಾರ ಇಟ್ಟುಕೊಳ್ಳುವ ಬದಲು ಸಣ್ಣ ಸಣ್ಣ ಪ್ಯಾಕ್ ನಲ್ಲಿ ಇಟ್ಟುಕೊಳ್ಳಿ. ಜಿಪ್ಲಾಕ್ ಪ್ಯಾಕ್ ನಲ್ಲಿಟ್ಟುಕೊಂಡರೆ ಆಗಾಗ ತಿನ್ನುವುದು ಸುಲಭ. ಹಾಗೆ ಕೈಗಳಿಂದ ಮುಟ್ಟದೆ ಆಹಾರ ಸೇವನೆ ಮಾಡಲು ಪ್ರಯತ್ನಿಸಿ.
ಊಟ ಅಥವಾ ಭೋಜನದಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿ. ಸ್ಯಾಂಡ್‌ವಿಚ್‌ಗಳು, ಫ್ರೈಡ್ರೈಸ್ ಇತ್ಯಾದಿಗಳನ್ನು ಒಯ್ಯಬಹುದು. ಇದು ಹೊಟ್ಟೆ ತುಂಬಿಸುತ್ತದೆ. ರೊಟ್ಟಿ ರೋಲ್ ಕೂಡ ನೀವು ತೆಗೆದುಕೊಂಡು ಹೋಗಬಹುದು. ಎರಡು-ಮೂರು ದಿನ ಉಳಿಯುವ ಪ್ಲಾನ್ ನಲ್ಲಿದ್ದರೆ ಅದಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಪ್ಯಾಕ್ ಮಾಡಿ.