ಬೆಂಗಳೂರು: ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಭಾರತೀಯ ಪ್ರಜೆಯು ಭಾರತೀಯ ಪಾಸ್ಪೋರ್ಟ್ ಬಳಸಿಕೊಂಡು ಯಮನ್ ದೇಶಕ್ಕೆ ಪ್ರಯಾಣಿಸುವಂತಿಲ್ಲ. ಇಂಥದೊಂದು ಆದೇಶ ಇದ್ದರೂ ಇಲ್ಲಿನ ಪ್ರಯಾಣಿಕನೊಬ್ಬ ಯಮನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಹೀಗಾಗಿ ಆತನ ಮೇಲೆ ದೂರು ದಾಖಲು ಮಾಡಲಾಗಿದೆ.
ಹೌದು, ಉಡುಪಿ ಮೂಲದ 33 ವರ್ಷದ ಶೇಖ್ ಮಹಮ್ಮದ್ ಸೂಫಿಯಾನ್ ಮೇಲೆ ಇದೀಗ ದೂರು ದಾಖಲಾಗಿದೆ. ಡಿಸೆಂಬರ್ 12 ರಂದು ಶೇಖ್ ಮಹಮ್ಮದ್ ಸೂಫಿಯನ್ ಸುಡಾನ್ ಶಾರ್ಜಾ ಮಾರ್ಗವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.
2012ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿದ್ದ ಇವರು, ನಜರಾನಲ್ಲಿ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದರಂತೆ. ಇವರ ಕಂಪನಿಯ ಬ್ರಾಂಚ್ ಆಫೀಸ್ ಯಮನ್ ದೇಶದ ಅಡೆನ್ನದಲ್ಲಿಯೂ ಇದೆಯಂತೆ. ಹೀಗಾಗಿ ಅಲ್ಲಿಗೆ ಹೋಗಿದ್ದಾರೆ ಎನ್ನಲಾಗಿದೆ.
ಇವರು ಬೆಂಗಳೂರಿಗೆ ಬಂದಾಗ ಯಮನ್ ದೇಶಕ್ಕೆ ಹೋಗಿ ಬಂದಿರೋದು ದಾಖಲಾಗಿದೆ. ಇನ್ನು ಏರ್ಪೋರ್ಟ್ನ ಇಮಿಗ್ರೇಷನ್ ಅಧಿಕಾರಿಗಳು ಈ ಪ್ರಯಾಣಿಕನ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಹೀಗಾಗಿ ಈ ಪ್ರಯಾಣಿಕನ ವಿರುದ್ಧ ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.