ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ.
ವೇತನ ಹೆಚ್ಚಳ, ವೇತನ ಹೆಚ್ಚಳ ಬಾಕಿ ಜೊತೆಗೆ ನಿವೃತ್ತ ನೌಕರರ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಬಾಕಿ ಪಾವತಿಸುವಂತೆ ಒತ್ತಾಯಿಸಿ ಡಿಸೆಂಬರ್ 31 ರಿಂದ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.
ಮುಷ್ಕರ ತಡೆಯುವ ಉದ್ದೇಶದಿಂದ ಸಾರಿಗೆ ಸಚಿವರು 11,694 ನಿವೃತ್ತ ಸಿಬ್ಬಂದಿಗೆ 224.05 ಕೋಟಿ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಆದೇಶಿಸಿದ್ದಾರೆ. ಸಾಂಕೇತಿಕವಾಗಿ ಮೂವರು ನಿವೃತ್ತ ಸಿಬ್ಬಂದಿಗೆ ಚೆಕ್ ವಿತರಿಸಲಾಗಿದ್ದು, ಉಳಿದವರಿಗೆ ಹಣ ಪಾವತಿಗೆ ಸೂಚನೆ ನೀಡಲಾಗಿದೆ.
ಇನ್ನು ನೌಕರರು ಮುಷ್ಕರದಿಂದ ಹಿಂದೆ ಸರಿಯದಿದ್ದರೆ ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಎಸ್ಮಾ ಜಾರಿಯಾದಲ್ಲಿ ನೌಕರರು ಪ್ರತಿಭಟನೆ ಅಥವಾ ಮುಷ್ಕರಕ್ಕಾಗಿ ಕರ್ತವ್ಯ ಬಹಿಷ್ಕರಿಸುವಂತಿಲ್ಲ. ನೌಕರರನ್ನು ವಾರೆಂಟ್ ರಹಿತ ಬಂಧಿಸಬಹುದು. ಆರು ತಿಂಗಳು ಜೈಲು ಶಿಕ್ಷೆಯಾಗುವಂತೆ ಮಾಡಬಹುದಾಗಿದೆ.