ಬೆಂಗಳೂರು: ಕಡ್ಡಾಯ ವರ್ಗಾವಣೆಯಾಗಿದ್ದ ಎಲ್ಲಾ ಶಿಕ್ಷಕರಿಗೆ ಆದ್ಯತೆ ನೀಡುವಂತೆ ಶಿಕ್ಷಕ ಸಮುದಾಯದಿಂದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಲಾಗಿದೆ.
ತಾಲೂಕಿನ ಒಳಗೆ ದೂರದ ಊರುಗಳಿಗೆ ವರ್ಗಾವಣೆಯಾದವರಿಗೂ ಅವಕಾಶ ನೀಡಬೇಕೆಂದು ಕೋರಲಾಗಿದೆ. ಕಳೆದ ಸಲ ಕಡ್ಡಾಯ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ ಎಲ್ಲ ಶಿಕ್ಷಕರಿಗೂ ಈ ಬಾರಿ ವರ್ಗಾವಣೆಗೆ ಅವಕಾಶ ಕೊಡುವಂತೆ ಮನವಿ ಮಾಡಲಾಗಿದೆ.
ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕೆಲ ಅವೈಜ್ಞಾನಿಕ ವರ್ಗಾವಣೆ ನಿಯಮಗಳಿಂದ ಕಳೆದ ಸಲ ಸಾವಿರಾರು ಶಿಕ್ಷಕರು ಎ ವಲಯಗಳಿಂದ ಸಿ ವಲಯಗಳಿಗೆ ಕಡ್ಡಾಯ ವರ್ಗಾವಣೆಗೊಂಡಿದ್ದರು.
55 ವರ್ಷ ಮೀರಿದ ಶಿಕ್ಷಕರು ಮತ್ತು ಹೆಚ್ಚುವರಿ ಶಿಕ್ಷಕರನ್ನು ಕೂಡ ವರ್ಗಾವಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮುಂದಿನ ವರ್ಗಾವಣೆಯಲ್ಲಿ ಆದ್ಯತೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಅಂತೆಯೇ ಕಳೆದ ಬಾರಿ ಜಿಲ್ಲೆ ಮತ್ತು ತಾಲೂಕುಗಳ ವ್ಯಾಪ್ತಿಯಲ್ಲಿ ದೂರದ ಶಾಲೆಗಳಿಗೆ ಕಡ್ಡಾಯ ವರ್ಗಾವಣೆಯಾಗಿದ್ದ ಶಿಕ್ಷಕರಿಗೂ ಈ ಬಾರಿ ಆದ್ಯತೆ ನೀಡಬೇಕೆಂದು ಕೋರಲಾಗಿದೆ.