ಬೆಂಗಳೂರು: ವರ್ಗಾವಣೆ ಗೆ ಕಾಯುತ್ತಿದ್ದ ಶಿಕ್ಷಕರಿಗೆ ಬೇಸರದ ಸುದ್ದಿ ಇಲ್ಲಿದೆ. ಅಂತಿಮ ನಿಯಮ ಬಿಡುಗಡೆಯಾಗದ ಕಾರಣ ಸದ್ಯಕ್ಕೆ ಶಿಕ್ಷಕರ ವರ್ಗಾವಣೆ ಇರುವುದಿಲ್ಲ.
ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದೂಡಿಕೆಯಾಗಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ –ತಿದ್ದುಪಡಿ) ಅಧಿನಿಯಮ 2022ರ ಅಂತಿಮ ನಿಯಮಗಳು ಬಿಡುಗಡೆಯಾಗದ ಕಾರಣ ಶಿಕ್ಷಣ ಇಲಾಖೆ ಸಚಿವಾಲಯದತ್ತ ಮುಖ ಮಾಡಿದೆ.
ಶಿಕ್ಷಕರ ಸ್ನೇಹಿಯಾಗಿ ಶಿಕ್ಷಣ ಇಲಾಖೆ ವರ್ಗಾವಣೆ ಕಾಯ್ದೆ ರೂಪಿಸಿದ್ದು, ಕರಡು ಪ್ರತಿಗೆ 2771 ಅಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಎಲ್ಲಾ ಆಕ್ಷೇಪಣೆ ಪರಿಶೀಲಿಸಿ ತಕ್ಕ ಉತ್ತರ ನೀಡಲಾಗಿದ್ದು, ಇದರ ಆಧಾರದಲ್ಲಿ ಸಚಿವಾಲಯದ ಹಂತದಲ್ಲಿ ಅಂತಿಮ ನಿಯಮ ರೂಪಿಸಿ ಬಿಡುಗಡೆಯಾಗಬೇಕಿದೆ.
ಆದರೆ, ಉನ್ನತ ಅಧಿಕಾರಿಗಳು ಕಲಾಪದಲ್ಲಿ ನಿರತರಾಗಿರುವ ಕಾರಣ ವರ್ಗಾವಣೆ ಕಾರ್ಯಕ್ಕೆ ತೊಡಕು ಉಂಟಾಗಿದೆ. ವರ್ಷಾಂತ್ಯ ರಜೆ ಖಾಲಿ ಮಾಡಿಕೊಳ್ಳುವ ಕಾರಣ ಬಹುತೇಕ ಅಧಿಕಾರಿಗಳು ರಜೆ ಮೇಲೆ ತೆರಳಲಿದ್ದಾರೆ. ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಶಿಕ್ಷಕರ ವರ್ಗಾವಣೆ ಮುಂದೂಡಿಕೆಯಾಗಿದ್ದು. ಜನವರಿ ಅಂತ್ಯಕ್ಕೆ ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ. ಇಲ್ಲವಾದರೆ ಮೇ ತಿಂಗಳಲ್ಲಿ ವರ್ಗಾವಣೆ ನಡೆಯಬಹುದು.
ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ನಡೆಯಲಿದ್ದು, ಶಿಕ್ಷಕರು ಪರೀಕ್ಷಾ ಕಾರ್ಯ ಬಿಟ್ಟು ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗುತ್ತದೆ. ಇದರಿಂದ ಆದಷ್ಟು ಬೇಗನೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ಒತ್ತಾಯ ಕೂಡ ಕೇಳಿ ಬಂದಿದೆ.