ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಕೆಎಟಿ ತಡೆ ನೀಡಿದೆ. ಹಾಗಾಗಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದರೂ ಕೆಎಟಿ ತಡೆ ನೀಡಿರುವುದರಿಂದ ಈ ವರ್ಷ ವರ್ಗಾವಣೆ ಇಲ್ಲವೆಂದು ಹೇಳಲಾಗುತ್ತಿದೆ.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಪದವಿ ಕಾಲೇಜು ಪ್ರಾಧ್ಯಾಪಕರ ವರ್ಗಾವಣೆಗೆ ನಿಯಮ ಅಂತಿಮವಾಗಿಲ್ಲ. ಹಾಗಾಗಿ ಈ ವರ್ಷ ವರ್ಗಾವಣೆ ನಡೆಯುವ ಸಾಧ್ಯತೆ ಕಡಿಮೆಯಾಗಿದೆ ಎನ್ನಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಗೆ ಕಾಯುತ್ತಿರುವ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಧ್ಯಾಪಕರುಗಳಿಗೆ ಮತ್ತೆ ನಿರಾಸೆಯಾಗಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದರೂ, ಕೆಲವರು ಕೆಎಟಿ ಮೊರೆ ಹೋಗಿದ್ದ ಕಾರಣ ಪ್ರಕ್ರಿಯೆಗೆ ನಾನಾ ಕಾರಣಗಳಿಂದಾಗಿ ತಡೆ ನೀಡಲಾಗಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಕಾನೂನು ತಜ್ಞರ ಸಲಹೆ ಪಡೆದು ಪ್ರಕ್ರಿಯೆ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಕೂಡ ವರ್ಗಾವಣೆ ವಿಳಂಬವಾಗಬಹುದು. 2017 ರ ತಿದ್ದುಪಡಿ ಕಾಯ್ದೆಯಂತೆ ಹಿಂದಿನ ವರ್ಷ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆಯೊಂದಿಗೆ ಪಿಯುಸಿ ಉಪನ್ಯಾಸಕರ ವರ್ಗಾವಣೆ ನಡೆಸಲಾಗಿತ್ತು. ಈ ವರ್ಷ ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಕಾಯ್ದೆ ಮಾಡಲಾಗಿದ್ದು, ಪದವಿಪೂರ್ವ ಉಪನ್ಯಾಸಕರಿಗೆ ಹಳೆಯ ಕಾಯ್ದೆ ಅನ್ವಯವಾಗುತ್ತದೆ ಎನ್ನಲಾಗಿದೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸದ್ಯಕ್ಕೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಇನ್ನು ಸರ್ಕಾರದಿಂದ ನಿಯಮ ರಚನೆಯಾದ ಬಳಿಕ ಪ್ರಾಧ್ಯಾಪಕರ ವರ್ಗಾವಣೆ ಆರಂಭಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.