ಬೆಂಗಳೂರು: ಕೊರೋನಾದಿಂದ ಮುಂದೂಡಲ್ಪಟ್ಟಿದ್ದ ಸರ್ಕಾರಿ ನೌಕರರ ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ. ಶೇಕಡ 6 ರ ಮಿತಿ ಮೀರದಂತೆ ಗ್ರೂಪ್ ಬಿ, ಗ್ರೂಪ್ ಸಿ ವರ್ಗದ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಸಾರ್ವತ್ರಿಕ ವರ್ಗಾವಣೆ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅನುಮತಿ ನೀಡಿದೆ.
ಸಂಬಂಧಿಸಿದ ಇಲಾಖೆಗಳಲ್ಲಿ ಜುಲೈ 22 ರವರೆಗೆ ವರ್ಗಾವಣೆ ನಡೆಸಲು ಆಯಾ ಇಲಾಖೆಗಳ ಸಚಿವರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ. ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ಕೋವಿಡ್ ಸಂಕಷ್ಟದ ಪರಿಸ್ಥಿತಿ ಹಿನ್ನೆಲೆಯಲ್ಲಿ ವರ್ಗಾವಣೆ ಮುಂದೂಡಲಾಗಿತ್ತು.
2021 -22 ನೇ ಸಾಲಿಗೆ ಗ್ರೂಪ್ ಬಿ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿಗಳು, ನೌಕರರಿಗೆ ಮಾತ್ರ ಅನ್ವಯವಾಗುವಂತೆ ಮಿತಿಗೊಳಿಸಿ ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡ 6 ಮೀರದಂತೆ ಸಾರ್ವತ್ರಿಕ ವರ್ಗಾವಣೆ ಮಾಡಲು ಇಲಾಖೆಯ ಸಚಿವರಿಗೆ ಅಧಿಕಾರ ನೀಡಿದ್ದು, ಜುಲೈ 22 ರವರೆಗೆ ಸಾರ್ವತ್ರಿಕ ವರ್ಗಾವಣೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.