ಬೆಂಗಳೂರು: ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಸರ್ಕಾರ ಅನುಮೋದನೆ ನೀಡಿದ್ದು, ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.
ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲ ಅವಕಾಶ ನೀಡಲಾಗಿದ್ದು, ಈ ನಿಯಮದ ಅನ್ವಯ ವರ್ಗಾವಣೆಯಾಗಬೇಕಾದಲ್ಲಿ ಒಂದೇ ಸ್ಥಳದಲ್ಲಿ 7 ವರ್ಷ ಸೇವೆ ಪೂರ್ಣಗೊಳಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದಕ್ಕೆ ಸರ್ಕಾರಿ ನೌಕರರ ವಲಯದಲ್ಲಿ ಆಕ್ಷೇಪ ಕೇಳಿ ಬಂದಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮ -2021 ಹೊರಡಿಸುವ ಮೂಲಕ ಸ್ವಂತ ಕೋರಿಕೆ ವರ್ಗಾವಣೆಗೆ ಅವಕಾಶವಿದ್ದ 16 ಎ ನಿಯಮವನ್ನು ಕಾಯ್ದೆಯಿಂದ ತೆಗೆದು ಹಾಕಲಾಗಿದ್ದು, ಸಿ ಮತ್ತು ಡಿ ದರ್ಜೆಯ ನೌಕರರನ್ನು ಒಂದು ಜೇಷ್ಠ ಘಟಕದಿಂದ ಮತ್ತೊಂದು ಘಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆ ಮಾಡಲು ಇಲಾಖೆ ಮುಖ್ಯಸ್ಥರಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು.
ಪತಿ ಪತ್ನಿ ವರ್ಗಾವಣೆಗೂ ಅವಕಾಶ ಇರಲಿಲ್ಲ. ಈಗ ಸರ್ಕಾರಿ ನೌಕರರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಿದ್ದುಪಡಿ ತಂದು ಹಿಂದಿನ ನಿಯಮ ಮರು ಸ್ಥಾಪಿಸಲಾಗಿದೆ. ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅನುಮೋದನೆ ನೀಡಿಲಾಗಿದೆ.