ಬೆಂಗಳೂರು: 6 ನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಅನೇಕ ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ಈಗ ವರ್ಗಾವಣೆಯನ್ನು ಕೆಎಸ್ಆರ್ಟಿಸಿ ಹಿಂಪಡೆದುಕೊಂಡಿದೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಏಪ್ರಿಲ್ ನಲ್ಲಿ 15 ದಿನ ಮುಷ್ಕರ ನಡೆಸಿದ್ದು, ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿದ್ದರೂ, ಮುಷ್ಕರ ಮುಂದುವರೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ 7 ಸಾವಿರಕ್ಕೂ ಹೆಚ್ಚು ನೌಕರರು, ತರಬೇತಿ ನಿರತ ನೌಕರರ ವಿರುದ್ಧ ಅಮಾನತು, ವರ್ಗಾವಣೆ, ವಜಾ ಮಾಡಿ ಕ್ರಮ ಕೈಗೊಳ್ಳಲಾಗಿತ್ತು.
ಇದರ ವಿರುದ್ಧ ನೌಕರರು ಹೈಕೋರ್ಟ್ ಮೊರೆ ಹೋಗಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಈಗ ಪ್ರಕರಣಗಳನ್ನು ನಿಗಮಗಳು ಇತ್ಯರ್ಥಗೊಳಿಸಿದ್ದು, ಕೆಎಸ್ಆರ್ಟಿಸಿ 62 ತಾಂತ್ರಿಕ ಸಿಬ್ಬಂದಿ ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ. ಅಮಾನತು ಮತ್ತು ವಜಾಗೊಂಡ ನೌಕರರ ಪ್ರಕರಣಗಳ ಪರಿಶೀಲನೆ ನಡೆಯುತ್ತಿದ್ದು ಅವುಗಳನ್ನು ಕೂಡ ಇತ್ಯರ್ಥ ಪಡಿಸಲಾಗುವುದು. ಮುಷ್ಕರ ಹತ್ತಿಕ್ಕಲು ಘೋಷಿಸಲಾಗಿದ್ದ ವಿಭಾಗಗಳ ನಡುವಿನ ನೌಕರರ ವರ್ಗಾವಣೆಯನ್ನು ಕೆಎಸ್ಆರ್ಟಿಸಿ ಪಡೆದುಕೊಂಡಿದೆ ಎಂದು ಹೇಳಲಾಗಿದೆ.