16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಂಗಳಮುಖಿಗೆ ತಿರುವನಂತಪುರಂನ ವಿಶೇಷ ತ್ವರಿತ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ.
ಆರೋಪಿ ಸಚು ಸ್ಯಾಮ್ಸನ್ (34) ತಿರುವನಂತಪುರಂ ಜಿಲ್ಲೆಯ ಚಿರೈಂಕೀಝು ಮೂಲದ ತೃತೀಯಲಿಂಗಿ. ಈ ಮೂಲಕ ಅಪರಾಧಕ್ಕಾಗಿ ತೃತೀಯ ಲಿಂಗಿಯೊಬ್ಬರಿಗೆ ಶಿಕ್ಷೆಯಾಗುತ್ತಿರುವುದು ಕೇರಳದಲ್ಲಿ ಇದೇ ಮೊದಲು. ಪ್ರಕರಣ ಸಂಬಂಧ ದಂಡ ಪಾವತಿಸದಿದ್ದಲ್ಲಿ ಆರೋಪಿ ಇನ್ನೂ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶ ಆಜ್ ಸುದರ್ಶನ್ ತೀರ್ಪಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಫೆಬ್ರವರಿ 23, 2016 ರಂದು ನಡೆದಿತ್ತು.
ಆರೋಪಿಯು ಚಿರಯಿಂಕೀಝುನಿಂದ ರೈಲಿನಲ್ಲಿ ತಿರುವನಂತಪುರಂಗೆ ಬರುತ್ತಿದ್ದಾಗ ಸಂತ್ರಸ್ತ ಬಾಲಕನನ್ನ ಭೇಟಿಯಾದರು. ಬಾಲಕನನ್ನು ತಂಪನೂರು ಸಾರ್ವಜನಿಕ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಅಸ್ವಾಭಾವಿಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಆರೋಪ . ಬಾಲಕ ಆರೋಪಿಯೊಂದಿಗೆ ಹೋಗಲು ನಿರಾಕರಿಸಿದಾಗ ಆರೋಪಿಯು ಆತನಿಗೆ ಬೆದರಿಕೆ ಹಾಕಿದ್ದರು. ಭಯಗೊಂಡ ಬಾಲಕ ಘಟನೆಯ ಬಗ್ಗೆ ಮನೆಯವರಿಗೆ ತಿಳಿಸಿರಲಿಲ್ಲ.
ನಂತರ ಆರೋಪಿಯು ಬಾಲಕನಿಗೆ ಹಲವು ಬಾರಿ ಕರೆ ಮಾಡಿ, ಕೆಲವು ಸ್ಥಳಗಳಿಗೆ ಬರುವಂತೆ ಹೇಳಿದ್ದು, ಆತ ನಿರಾಕರಿಸಿದ್ದಾನೆ. ಹುಡುಗ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿರುವುದನ್ನು ತಾಯಿ ಗಮನಿಸಿದ್ದರು. ಮತ್ತು ಫೋನ್ನಲ್ಲಿ ಮಾತನಾಡುವಾಗ ಅವನು ಚಿಂತಿತನಾಗಿದ್ದನ್ನ ಕಂಡಿದ್ದರು. ಬಾಲಕ ಫೋನ್ ನಂಬರ್ ಬ್ಲಾಕ್ ಮಾಡಿದಾಗ ಆರೋಪಿಯು ಫೇಸ್ ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿದ್ದಾರೆ.
ಬಾಲಕನ ಫೇಸ್‌ಬುಕ್ ಖಾತೆಗೆ ಅವನ ತಾಯಿಯ ಫೋನ್‌ಗೆ ಲಾಗ್ ಇನ್ ಆಗಿದ್ದು, ಸಂದೇಶಗಳನ್ನು ನೋಡಿದಾಗ ಕಿರುಕುಳದ ಬಗ್ಗೆ ತಿಳಿದುಕೊಂಡ ಅವರು ಆರೋಪಿಗಳಿಗೆ ಉತ್ತರಿಸಿದ್ದಾರೆ. ಪೊಲೀಸರ ನಿರ್ದೇಶನದಂತೆ ತಾಯಿ ಆರೋಪಿಗೆ ಸಂದೇಶ ರವಾನಿಸಿ ತಂಪನೂರಿಗೆ ಕರೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.