ಹೆಣ್ಣಿಗೆ ಮಾತೃತ್ವ ಎನ್ನುವುದು ಒಂದು ಅನನ್ಯ ಅನುಭೂತಿ. ಆದರೆ ಈ ಒಂಬತ್ತು ತಿಂಗಳ ಅವಧಿಯಲ್ಲಿ ತಮ್ಮ ಒಡಲಲ್ಲಿ ಕಂದನನ್ನು ಹೊರುವ ಜೊತೆಗೆ ಮನೆ, ಕುಟುಂಬದ ಜವಾಬ್ದಾರಿಯನ್ನೂ ಅವರು ನಿರ್ವಹಿಸುತ್ತಾರೆ. ಪ್ರಸವದ ವೇಳೆ ನೋವನ್ನು ಅನುಭವಿಸುವ ಅವರು ಬಳಿಕ ಪುನರ್ಜನ್ಮ ಪಡೆಯುತ್ತಾರೆ ಎಂದೇ ಹೇಳಬಹುದು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಪತಿ-ಪತ್ನಿ ಇಬ್ಬರೂ ಸಹ ದುಡಿಯುವ ಕಾರಣ ಅಂತಹ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಬಲು ಕಷ್ಟಕರವಾಗುತ್ತದೆ. ಸರ್ಕಾರಿ ಹಾಗೂ ಬಹುತೇಕ ಖಾಸಗಿ ಕಂಪನಿಗಳಲ್ಲಿ ಇಂತಹ ಮಹಿಳೆಯರಿಗೆ ಕಡ್ಡಾಯವಾಗಿ ಮಾತೃತ್ವ ರಜೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ. ಇನ್ನು ಕೆಲವು ಕಡೆ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಪಿತೃತ್ವ ರಜೆಯನ್ನೂ ನೀಡಲಾಗುತ್ತದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಪತಿಯಂದಿರು ತಮ್ಮ ಪತ್ನಿ ಗರ್ಭಿಣಿಯಾದ ವೇಳೆ ವಹಿಸಬೇಕಾದ ಜವಾಬ್ದಾರಿ ಕುರಿತು ತಿಳಿಸಿಕೊಡಲಾಗಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಿಂದಿನ ಕಾಲದಲ್ಲಿ ಮನೆಯಲ್ಲಿದ್ದ ಹಿರಿಯರು ತಮ್ಮ ಅನುಭವದ ಮಾತುಗಳನ್ನು ಹೇಳುವ ಮೂಲಕ ಸಸೂತ್ರ ಹೆರಿಗೆಗೆ ಮುಂಜಾಗ್ರತೆ ವಹಿಸುತ್ತಿದ್ದರು ಎಂದು ಅಭಿಪ್ರಾಯ ಪಟ್ಟಿದ್ದಾರೆ.