ಪುಣೆ: ತರಬೇತಿ ವಿಮಾನವೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಹಳ್ಳಿಯೊಂದರ ಬಳಿ ಗುರುವಾರ ಸಂಜೆ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯ ಬಾರಾಮತಿ ತಾಲೂಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಖಾಸಗಿ ವಿಮಾನ ತರಬೇತಿ ಅಕಾಡೆಮಿಗೆ ಸೇರಿದ ವಿಮಾನದಲ್ಲಿದ್ದ ಪೈಲಟ್ ಮತ್ತು ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ರೆಡ್‌ಬರ್ಡ್ ಇನ್‌ಸ್ಟಿಟ್ಯೂಟ್ ಗೆ(ರೆಡ್‌ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ) ಸೇರಿದ ತರಬೇತಿ ವಿಮಾನವು ಬಾರಾಮತಿ ತಾಲೂಕಿನ ಕಟ್‌ಫಾಲ್ ಗ್ರಾಮದ ಬಳಿ ಸಂಜೆ 5 ಗಂಟೆ ಸುಮಾರಿಗೆ ಅಪಘಾತಕ್ಕೀಡಾಯಿತು. ಪೈಲಟ್ ಮತ್ತು ಇನ್ನೊಬ್ಬರು(ಸಹ ಪೈಲಟ್ ಆಗಿರಬಹುದು) ವಿಮಾನದಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಬಾರಾಮತಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಭಾಕರ ಮೋರೆ ಹೇಳಿದ್ದಾರೆ.
ಖಾಸಗಿ ವಿಮಾನಯಾನ ಕಂಪನಿಯ ತರಬೇತು ವಿಮಾನ ಬಾರಾಮತಿಯಲ್ಲಿ ರನ್ ವೇಯಿಂದ ಟೇಕಾಫ್ ಆಗಿತ್ತು, ಆದರೆ ಕೆಲವು ತಾಂತ್ರಿಕ ದೋಷದಿಂದಾಗಿ ಸಂಜೆ ಕಟ್ ಫಾಲ್ ಗ್ರಾಮದ ಬಳಿ ಕ್ರ್ಯಾಶ್-ಲ್ಯಾಂಡ್ ಆಗಿದೆ. ಮಾಹಿತಿ ಪಡೆದ ಪುಣೆ ಗ್ರಾಮಾಂತರ ಪೊಲೀಸರ ತಂಡವು ತನಿಖೆಗಾಗಿ ಸ್ಥಳಕ್ಕೆ ಧಾವಿಸಿತು. ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕ(ಡಿಜಿಸಿಎ) ತಂಡವು ಈ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಹೇಳಲಾಗಿದೆ.