ಅಹಮದಾಬಾದ್: ಏರ್ ಹೋಸ್ಟೆಸ್ ಪ್ರಶಿಕ್ಷಣಾರ್ಥಿ ಮೇಲೆ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದಾನೆ.
ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಇನ್ಸ್ಟಾಗ್ರಾಮ್ ಮೂಲಕ ಪರಿಚಿತನಾದ 22 ವರ್ಷದ ಯುವಕನಿಂದ ಮಾದಕ ದ್ರವ್ಯ ಸೇವಿಸಿದ್ದ ಯುವತಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆರೋಪಿ ತನ್ನ ಕೃತ್ಯದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ನಂತರ ವಿಡಿಯೋ ಕ್ಲಿಪ್ ಬಳಸಿ ಹಲವು ಬಾರಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಯುವತಿ ಪೋಲಿಸರಿಗೆ ದೂರು ನೀಡಿದ ನಂತರ, ಅಜಿತ್ ತ್ರಿವೇದಿ ಎಂದು ಗುರುತಿಸಲಾದ ಆರೋಪಿಯನ್ನು ಅಹಮದಾಬಾದ್ನ ವೆಜಲ್ಪುರದ ಆತನ ಮನೆಯಿಂದ ಬಂಧಿಸಲಾಗಿದೆ.
22 ವರ್ಷದ ಯುವತಿ 7 ತಿಂಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ತ್ರಿವೇದಿ ಜೊತೆ ಸಂಪರ್ಕ ಹೊಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಚಾಟ್ ಮಾಡುತ್ತಿದ್ದರು ನಂತರ ತಮ್ಮ ಫೋನ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡರಲ್ಲದೇ ಭೇಟಿಯಾಗಲು ಯೋಜಿಸಿದ್ದಾರೆ.
ಈ ವರ್ಷ ಏಪ್ರಿಲ್ನಲ್ಲಿ ತ್ರಿವೇದಿ ತನ್ನ ಮನೆಗೆ ಯುವತಿ ಕರೆಸಿಕೊಂಡಿದ್ದು, ಅಲ್ಲಿ ಆಕೆಗೆ ನಿದ್ರಾಜನಕ ಹಾಕಿದ್ದ ತಂಪು ಪಾನೀಯ ನೀಡಿದ್ದಾನೆ. ಪಾನೀಯ ಸೇವಿಸಿದ ನಂತರ ಆಕೆ ಪ್ರಜ್ಞಾಹೀನಳಾಗಿದ್ದ ವೇಳೆ ಅತ್ಯಾಚಾರ ಎಸಗಿದ್ದಾನೆ. ಇಡೀ ಕೃತ್ಯವನ್ನು ಆತನ ಸೆಲ್ ಫೋನ್ನಲ್ಲಿ ಚಿತ್ರೀಕರಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ನಂತರದಲ್ಲಿ ವಿಡಿಯೋ ತೋರಿಸಿ ಬೆದರಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಆರೋಪಿಯ ಬೇಡಿಕೆಗಳನ್ನು ತಿರಸ್ಕರಿಸಿದಾಗಲೆಲ್ಲ ಹಲ್ಲೆ ಕೂಡ ನಡೆಸಿದ್ದಾನೆ ಎಂದು ಯುವತಿ ತಿಳಿಸಿದ್ದು, ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ತ್ರಿವೇದಿಯನ್ನು ಬಂಧಿಸಿದ್ದಾರೆ.