ಬೆಂಗಳೂರು: ಏಪ್ರಿಲ್ 10 ರಿಂದ 13 ರವರೆಗೆ ವೀಕೆಂಡ್ ಹಾಗೂ ಯುಗಾದಿ ಹಬ್ಬದ ಕಾರಣ ಸಾಲು-ಸಾಲು ರಜೆ ಇದ್ದು, ಜನರೆಲ್ಲ ಊರಿಗೆ ಹೊರಟಿದ್ದಾರೆ. ಆದರೆ, ರಾಜ್ಯ ಸಾರಿಗೆ ನೌಕರರು ಮುಷ್ಕರ ಕೈಗೊಂಡಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.
ರಜೆ, ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವ ಕಾರಣಕ್ಕೆ ಹೆಚ್ಚುವರಿಯಾಗಿ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ. ಈಗ ರೈಲ್ವೇಯಿಂದಲೂ ವಿಶೇಷ ರೈಲುಗಳ ಕಾರ್ಯಾಚರಣೆಗೆ ಕ್ರಮಕೈಗೊಳ್ಳಲಾಗಿದೆ. ನೈರುತ್ಯ ರೈಲ್ವೆ ವಲಯದಿಂದ 18 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ –ಯಶವಂತಪುರ, ವಿಜಯಪುರ -ಯಶವಂತಪುರ, ಯಶವಂತಪುರ – ಹುಬ್ಬಳ್ಳಿ, ಮೈಸೂರು -ಬೀದರ್, ಬೀದರ್ -ಯಶವಂತಪುರ, ಕಾರವಾರ -ಯಶವಂತಪುರ, ಬೆಂಗಳೂರು-ಮೈಸೂರು ನಡುವೆ 18 ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ,
ಇಂದಿನಿಂದ ಏಪ್ರಿಲ್ 14 ರ ವರೆಗೆ 18 ವಿಶೇಷ ರೈಲುಗಳ ಕಾರ್ಯಾಚರಣೆ ಇರುತ್ತದೆ. ಮುಷ್ಕರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುವ ಕಾರಣಕ್ಕೆ ಸರ್ಕಾರದ ಮನವಿ ಮೇರೆಗೆ ವಿಶೇಷ ರೈಲುಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.