ಬೆಳಗಾವಿ: ರೈಲು ಚಾಲಕನ ಸಮಯ ಪ್ರಜ್ಞೆಯಿಂದ ನೂರಾರು ಮಂದಿ ಪ್ರಯಾಣಿಕರ ಜೀವ ಉಳಿದಿದೆ. ಜುಲೈ 23 ರಂದು ದೂಧ್ ಸಾಗರ ಸಮೀಪ ರೈಲಿನ ಮೇಲೆ ಗುಡ್ಡ ಕುಸಿದು ಇಂಜಿನ್ ಪಕ್ಕಕ್ಕೆ ಸರಿದ ಘಟನೆಯಲ್ಲಿ ರೈಲು ಚಾಲಕ ಮತ್ತು ಸಿಬ್ಬಂದಿ ತೋರಿದ ಸಮಯಪ್ರಜ್ಞೆಯಿಂದ ನೂರಾರು ಮಂದಿ ಜೀವ ಉಳಿದಿದೆ.
ದೂಧ್ ಸಾಗರ್ –ಸೋನಾಲಿಂ, ಕರಂಜೋಲ್ ಸಮೀಪ ಜುಲೈ 23 ರಂದು ಬೆಳಗ್ಗೆ ಗುಡ್ಡ ಕುಸಿದಿತ್ತು. ಗೋವಾದಲ್ಲಿ ಪ್ರವಾಹ ಉಂಟಾಗಿದ್ದರಿಂದ ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಕೊಂಕಣ್ ರೈಲ್ವೆ ರೈಲು ದೂಧ್ ಸಾಗರ್ ಮೂಲಕ ಸಂಚರಿಸುತ್ತಿತ್ತು. ರೈಲ್ವೆ ಹಳಿಗಳ ಮೇಲೆ ಅಲ್ಲಲ್ಲಿ ಮಣ್ಣು ಬೀಳುವುದನ್ನು ಗಮನಿಸಿದ ಲೋಕೋ ಪೈಲಟ್ ರಂಜಿತ್ ಕುಮಾರ್ ಅವರು ತಕ್ಷಣ ತುರ್ತು ಬ್ರೇಕ್ ಹಾಕಿದ್ದಾರೆ. ಸಹಾಯಕ ಲೋಕೋ ಪೈಲೆಟ್ ಹಶೀದ್, ರೈಲ್ವೇ ಗಾರ್ಡ್ ಶೈಲೇಂದರ್ ಕುಮಾರ್ ಅವರು ಇಂಜಿನ್ ಹಿಂದಿನ ಮೂರು ಬೋಗಿ ಪ್ರಯಾಣಿಕರನ್ನು ಹಿಂದಿನ ಬೋಗಿಗೆ ಕಳುಹಿಸಿದ್ದಾರೆ.
ತಕ್ಷಣವೇ ತುರ್ತು ಬ್ರೇಕ್ ಹಾಕಿದ್ದರಿಂದ ರೈಲು ಸ್ವಲ್ಪ ದೂರ ಮುಂದೆ ಸಾಗಿ ನಿಂತಿದೆ. ಭಾರಿ ಪ್ರಮಾಣದ ಮಣ್ಣು ರೈಲ್ವೆ ಎಂಜಿನ್ ಮತ್ತು ಅದರ ಹಿಂದಿನ ಒಂದು ಬೋಗಿಳಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ, ಸಿಬ್ಬಂದಿ ಸಮಯಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ. ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಹೇಳಲಾಗಿದೆ.