ಪ್ರಯಾಣಿಕರು ಇಳಿಯಲು ಕಾಯುತ್ತಿದ್ದ ನಡುವೆಯೇ ನಿಲ್ದಾಣವೊಂದರಲ್ಲಿ ನಿಲುಗಡೆ ನೀಡದೇ ಮುಂದೆ ಸಾಗಿದ್ದ ರೈಲೊಂದು ಕೆಲ ಕ್ಷಣಗಳ ಬಳಿಕ 700 ಮೀಟರ್‌ನಷ್ಟು ಹಿಂದಕ್ಕೆ ಬಂದು ಅದೇ ನಿಲ್ದಾಣದಲ್ಲಿ ನಿಂತ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಚೆರಿಯನಾಡ್ ನಿಲ್ದಾಣದಲ್ಲಿ ಘಟಿಸಿದೆ.
ಈ ನಿಲುಗಡೆಯನ್ನು ತಾನು ತಪ್ಪಿಸಿದ್ದೇನೆ ಎಂದು ಕೂಡಲೇ ಅರಿತ ಲೋಕೋ ಪೈಲಟ್ ಕೂಡಲೇ ರೈಲನ್ನು ಹಿಂದಕ್ಕೆ ತಂದಿದ್ದಾರೆ. ಮವೆಲಿಕ್ಕಾರಾ ಮತ್ತು ಚೆಂಗನಲ್ಲೂರು ನಿಲ್ದಾಣಗಳ ನಡುವೆ ಬರುವ ಚೆರಿಯನಾಡ್ ನಿಲ್ದಾಣದಲ್ಲಿ ಬೆಳಿಗ್ಗೆ 7:45ಕ್ಕೆ ಈ ರೈಲು ನಿಲ್ಲಬೇಕಿತ್ತು.
ತಿರುವನಂತಪುರಂನಿಂದ ಹೊರಟಿದ್ದ ವೆನಾಡ್ ಎಕ್ಸ್‌ಪ್ರೆಸ್ ರೈಲು – 16302 – ಈ ಘಟನೆಯಿಂದ ಸುದ್ದಿ ಮಾಡಿದೆ. ಈ ಅನಾನುಕೂಲದ ವಿರುದ್ಧ ಯಾವುದೇ ಪ್ರಯಾಣಿಕರು ದೂರು ನೀಡಿಲ್ಲ.
ಸಿಗ್ನಲ್ ಅಥವಾ ಸ್ಟೇಷನ್ ಮಾಸ್ಟರ್‌ರ ಗೈರಿನ ಕಾರಣ ಲೋಕೋ ಪೈಲಟ್ ಹೀಗೆ ಮಾಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರಣದಿಂದಾಗಿ ರೈಲಿನ ವೇಳಾಪಟ್ಟಿಯಲ್ಲಿ 8 ನಿಮಿಷಗಳ ವ್ಯತ್ಯಯವಾಗಿದ್ದು, ಈ ವ್ಯತ್ಯಾಸವನ್ನು ಲೋಕೋ ಪೈಲಟ್ ಸರಿದೂಗಿಸಿದ್ದಾರೆ.
ಈ ವಿಚಾರವಾಗಿ ಲೋಕೋ ಪೈಲಟ್‌ನಿಂದ ವಿವರಣೆ ಕೋರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.