ವರುಣನ ರುದ್ರನರ್ತನಕ್ಕೆ ತತ್ತರಿಸಿರುವ ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ಈಗಾಗಲೇ ನೂರಾರು ಮಂದಿ ಸಾವಿಗೀಡಾಗಿದ್ದು, ಅಷ್ಟೇ ಸಂಖ್ಯೆಯಲ್ಲಿ ಜನ ಕಣ್ಮರೆಯಾಗಿದ್ದಾರೆ. ನಾಪತ್ತೆಯಾಗಿರುವವರ ಹುಡುಕಾಟಕ್ಕಾಗಿ ರಕ್ಷಣಾ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಸಾವುನೋವಿನ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಭೀತಿ ವ್ಯಕ್ತವಾಗಿದೆ.
ಇದರ ಮಧ್ಯೆ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನೂರಿನಲ್ಲಿ ಸಂಭವಿಸಿದ ಭೂ ಕುಸಿತದ ವಿಷಯ ತಿಳಿದು ವಾಪಸ್ ಕೇರಳಕ್ಕೆ ಆಗಮಿಸಿದ್ದು, ಆದರೆ ಈ ದುರಂತದಲ್ಲಿ ತನ್ನಿಡಿ ಕುಟುಂಬ ಸಾವಿಗೀಡಾಗಿರುವುದರಿಂದ ಮುಂದೇನು ಎಂದು ದಿಕ್ಕು ತೋಚದೆ ಕಂಗಾಲಾಗಿ ಕುಳಿತಿದ್ದಾನೆ. ಈ ದುರಂತದಲ್ಲಿ ಆತನ ತಂದೆ, ತಾಯಿ, ಅಜ್ಜಿ, ಸಹೋದರರು ಸಾವನ್ನಪ್ಪಿದ್ದಾರೆ.
ಜಿಷ್ಣು ರಾಜನ್ ದುರಂತ ಸಂಭವಿಸಿದ ವಯನಾಡು ಜಿಲ್ಲೆಯ ಮುಂಡಕೈನ ಪೂಂಚಿವರ್ಟಂ ನಲ್ಲಿ ತಂದೆ ರಾಜನ್, ತಾಯಿ ಮರುತೈ, ಹಿರಿಯ ಸಹೋದರ ಜಿನು, ಸಹೋದರ ಸಂಬಂಧಿಗಳಾದ ಶಿಜು, ಜಿಬಿನ್, ಅಂಡ್ರಿಯ ಹಾಗೂ ಅಜ್ಜಿ ನಾಗಮ್ಮ ಜೊತೆ ವಾಸಿಸುತ್ತಿದ್ದು, ಜುಲೈ 30 ರಂದು ತಾವು ಕೆಲಸ ಮಾಡುತ್ತಿದ್ದ ಸೌದಿ ಅರೇಬಿಯಾ ತೆರಳಿದ್ದರು.
ಮೂರು ದಿನಗಳ ಹಿಂದೆ ತಮ್ಮ ಊರಿನಲ್ಲಿ ಭೂಕುಸಿತ ಸಂಭವಿಸಿದ ಕಾರಣ ಆತಂಕಕ್ಕೆ ಒಳಗಾಗಿ ಮನೆಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಸತತ ಪ್ರಯತ್ನದ ಬಳಿಕ ತಮ್ಮ ತಂದೆ ರಾಜನ್ ಹಾಗೂ ತಾಯಿ ಮರುತೈ ಶವ ಪತ್ತೆಯಾದ ವಿಷಯ ತಿಳಿದು ದುಃಖತಪ್ತರಾಗಿ ಕಡೆ ಪಕ್ಷ ಇತರೆ ಕುಟುಂಬ ಸದಸ್ಯರು ಬದುಕುಳಿದಿರಬಹುದು ಎಂಬ ಆಶಾಭಾವನೆಯಿಂದ ಭಾರತಕ್ಕೆ ಆಗಮಿಸಿದ್ದರು. ಆದರೆ ಇದೀಗ ಹಿರಿಯ ಸಹೋದರ ಹೊರತುಪಡಿಸಿ ಉಳಿದೆಲ್ಲರೂ ಮೃತಪಟ್ಟಿದ್ದಾರೆ.