ಮೆಕ್ಸಿಕೋದ ಹಿಡಾಲ್ಗೋದಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲು ತಲೆಗೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ರೈಲು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರೈಲು ಕೆನಡಾದಿಂದ ಮೆಕ್ಸಿಕೋ ನಗರಕ್ಕೆ ಪ್ರಯಾಣಿಸುವ ಸ್ಟೀಮ್ ಇಂಜಿನ್ ಆಗಿದ್ದು ಅನೇಕ ಸ್ಥಳೀಯರನ್ನು ಆಕರ್ಷಿಸುತ್ತದೆ. ಹಿಡಾಲ್ಗೊದಲ್ಲಿ ಹಾದುಹೋದಾಗ ಉಗಿ ಲೋಕೋಮೋಟಿವ್ ಎಂಪ್ರೆಸ್ 2816 ರನ್ನು ನೋಡಲು ಭಾರೀ ಜನಸಮೂಹ ಜಮಾಯಿಸಿತ್ತು. ಡುಲ್ಸೆ ಅಲೊಂಡ್ರಾ (28) ಎಂದು ಗುರುತಿಸಲಾದ ಯುವತಿ ಅಲ್ಲಿ ಸೇರಿದ್ದ ಜನರ ನಡುವೆ ಚಲಿಸುತ್ತಿರುವ ರೈಲಿನ ಹತ್ತಿರ ಕೂತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಳು.
ರೈಲು ಹತ್ತಿರ ಬರುವುದನ್ನೇ ಕಾಯುತ್ತಿದ್ದ ಆಕೆ ಮೊಣಕಾಲೂರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾಳೆ. ಆದಾಗ್ಯೂ ಅವಳು ರೈಲಿಗೆ ಅಪಾಯಕಾರಿಯಾದ ರೀತಿ ಹತ್ತಿರದಲ್ಲಿದ್ದೇನೆ ಎಂಬುದನ್ನ ಅಂದಾಜಿಸಲು ವಿಫಲಳಾಗಿದ್ದಳು. ರೈಲು ಹತ್ತಿರ ಬಂದಿದ್ದು ಎಂಜಿನ್‌ನ ಮುಂಭಾಗದ ಭಾಗವು ಅವಳ ತಲೆಗೆ ಅಪ್ಪಳಿಸಿತು. ಹೊಡೆತದ ರಭಸಕ್ಕೆ ತಕ್ಷಣವೇ ನೆಲಕ್ಕೆ ಬಿದ್ದ ಆಕೆ ಮೇಲೇ ಏಳಲೇ ಇಲ್ಲ. ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮಹಿಳೆ ಶಿಕ್ಷಕಿಯಾಗಿದ್ದು, ಆಕೆಗೆ ಪುಟ್ಟ ಮಗುವಿದೆ ಎಂದು ವರದಿಗಳು ತಿಳಿಸಿವೆ. ಆಕೆಯ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಮಿದುಳಿಗೆ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದಳು.