
ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಅಲ್ಲಿನ ಜೈಪುರ್ ಜಿಲ್ಲೆಯ ಗ್ರಾಮ ಒಂದರಲ್ಲಿ ಆಯೋಜಿಸಲಾಗಿದ್ದ ಭಜನೆ ಕಾರ್ಯಕ್ರಮದ ವೇಳೆ ನೃತ್ಯ ಮಾಡುತ್ತಿದ್ದ ಶಿಕ್ಷಕರೊಬ್ಬರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮನ್ನಾ ರಾಮ್ ಸಾವನ್ನಪ್ಪಿದವರಾಗಿದ್ದು, ಇವರು ಇತ್ತೀಚಿಗೆ ನಿವೃತ್ತರಾದ ತಮ್ಮ ಹಿರಿಯ ಸಹೋದರನ ಗೌರವಾರ್ಥ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗಳಮುಖಿ ಜೊತೆ ಡಾನ್ಸ್ ಮಾಡುತ್ತಿದ್ದರು.
ಆರಂಭದಲ್ಲಿ ದೊಡ್ಡ ಜೋಶ್ ನಲ್ಲಿ ನೃತ್ಯ ಮಾಡಿದ ಮನ್ನಾ ರಾಮ್, ಬಳಿಕ ಒಂದಷ್ಟು ಕಾಲ ವಿಶ್ರಾಂತಿ ಪಡೆದಿದ್ದಾರೆ. ನಂತರ ಅವರು ಮತ್ತೆ ನೃತ್ಯ ಮಾಡಲು ಮುಂದಾಗಿದ್ದು, ಈ ವೇಳೆ ಅಸ್ವಸ್ಥಗೊಂಡು ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರು ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದ ಮನ್ನಾರಾಮ್ ಬಂಧು – ಮಿತ್ರರು ಹಠಾತ್ ಸಂಭವಿಸಿದ ಈ ಆಘಾತದಿಂದ ದಿಗ್ಭ್ರಾಂತರಾಗಿ ಶೋಕ ತಪ್ತರಾಗಿದ್ದಾರೆ.