ರಾಂಚಿ: ಶಾಲೆಯಲ್ಲಿ ಶಿಕ್ಷಕನೊಬ್ಬ ಇಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿರುವ ಘಟನೆ ಜಾರ್ಖಂಡ್‌ನ ಗೊಡ್ಡಾ ಪಟ್ಟಣವನ್ನು ಬೆಚ್ಚಿಬೀಳಿಸಿದೆ. ಪೊರೈಯಾಹತ್‌ನ ಚಾತ್ರಾ ಉನ್ನತೀಕರಿಸಿದ ಶಾಲೆಯಲ್ಲಿ ಘಟನೆ ನಡೆದಿದೆ.
ಪ್ರೇಮ ಸಂಬಂಧ ಎಂದು ನಂಬಲಾದ ಈ ದುರಂತ ಘಟನೆಯು ಶಾಲಾ ಸಮಯದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದ್ದು, ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಆಘಾತ ತಂದಿದೆ.
ಶಾಲೆಯ ಗ್ರಂಥಾಲಯದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಶಿಕ್ಷಕರ ಶವಗಳು ಪತ್ತೆಯಾಗಿದ್ದು, ಆರೋಪಿ ಶಿಕ್ಷಕ ತೀವ್ರವಾಗಿ ಗಾಯಗೊಂಡಿರುವುದು ಪತ್ತೆಯಾಗಿದೆ. ಗುಂಡೇಟಿನ ಶಬ್ದದ ನಂತರ ಶಾಲೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಇಬ್ಬರೂ ಶಿಕ್ಷಕರು ಗಾಯಗೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ.
ಆರೋಪಿ ಶಿಕ್ಷಕ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಶಿಕ್ಷಕಿ, ಶಿಕ್ಷಕನ ಶವಗಳು ಶಾಲೆಯ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆದರೆ, ಆರೋಪಿ ಶಿಕ್ಷಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗೊಡ್ಡಾ ಪೊಲೀಸ್ ವರಿಷ್ಠಾಧಿಕಾರಿ ನಾಥು ಸಿಂಗ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ದುರಂತ ಘಟನೆಗೆ ಪ್ರೇಮ ಪ್ರಕರಣ ಕಾರಣವಾಗಿದೆ. ಇಬ್ಬರು ಶಿಕ್ಷಕರು ಮಹಿಳಾ ಶಿಕ್ಷಕಿಯೊಂದಿಗೆ ಪ್ರಣಯ ಸಂಬಂಧ ಹೊಂದಿದ್ದರು ಎಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಹೇಳಿದ್ದಾರೆ. ಮೃತರನ್ನು ಸುಜಾತಾ ಮಿಶ್ರಾ(35) ಮತ್ತು ಆದರ್ಶ್ ಸಿಂಗ್ (40), ಗಾಯಗೊಂಡ ಶಿಕ್ಷಕನನ್ನು ರವಿ ರಂಜನ್(42) ಎಂದು ಗುರುತಿಸಲಾಗಿದೆ. ಆರೋಪಿ ಶಿಕ್ಷಕನು ಗುಂಡು ಹಾರಿಸಲು ಕಂಟ್ರಿ ಮೇಡ್ ಪಿಸ್ತೂಲ್ ಬಳಸಿದ್ದಾನೆ. ಗಾಯಾಳು ಶಿಕ್ಷಕ ಸದ್ಯ ಗಂಭೀರ ಸ್ಥಿತಿಯಲ್ಲಿ ಗೊಡ್ಡಾದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.