ಕೋಲ್ಕತ್ತಾದಲ್ಲಿ 31 ವರ್ಷದ ಪಿಜಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಉತ್ತರಾಖಂಡ್ ನಲ್ಲಿ ನಡೆದ ಮತ್ತೊಂದು ಘೋರ ಕೃತ್ಯ ಬೆಳಕಿಗೆ ಬಂದಿದೆ.
ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಪುರದಲ್ಲಿ ಜುಲೈನಿಂದ ನಾಪತ್ತೆಯಾಗಿದ್ದ 33 ವರ್ಷದ ನರ್ಸ್ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಯನ್ನು ಉತ್ತರಾಖಂಡ್ ಪೊಲೀಸರು ಬಂಧಿಸಿದ್ದಾರೆ.
ಗದರ್ ಪುರದ ಇಸ್ಲಾಂನಗರದ ಮೃತ ಮಹಿಳೆ ಉತ್ತರಾಖಂಡದ ನೈನಿತಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆಕೆ ತನ್ನ 11 ವರ್ಷದ ಮಗಳೊಂದಿಗೆ ಬಿಲಾಸ್‌ಪುರ ಕಾಲೋನಿಯಲ್ಲಿ ವಾಸಿಸುತ್ತಿದ್ದಳು. ಜುಲೈ 31 ರಂದು ಆಕೆಯ ಸಹೋದರಿ ಕಾಣೆಯಾದ ದೂರು ನೀಡಿದ ನಂತರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಒಂದು ವಾರದ ನಂತರ ಉತ್ತರ ಪ್ರದೇಶದ ದಿಬ್ಡಿಬಾದಲ್ಲಿನ ಖಾಲಿ ಜಾಗದಲ್ಲಿ ಆಕೆಯ ಶವವನ್ನು ಪತ್ತೆ ಹಚ್ಚಲಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಶಂಕಿತ ಆರೋಪಿಯನ್ನು ಉತ್ತರ ಪ್ರದೇಶದ ಬರೇಲಿಯ ಕಾರ್ಮಿಕ ಧರ್ಮೇಂದ್ರ ಎಂದು ಗುರುತಿಸಲಾಗಿದ್ದು, ರಾಜಸ್ಥಾನದ ಜೋಧಪುರದಲ್ಲಿ ಬಂಧಿಸಲಾಗಿದೆ. ಧರ್ಮೇಂದ್ರ ನರ್ಸ್‌ಗೆ ಆಮಿಷ ಒಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಸಾಯಿಸಿ, ನಂತರ ಆಕೆಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ.
ರುದ್ರಪುರದ ಇಂದ್ರ ಚೌಕ್‌ನಿಂದ ಟೆಂಪೋದಲ್ಲಿ ಸಂತ್ರಸ್ತೆಯ ಕೊನೆಯ ಚಲನವಲನಗಳನ್ನು ಸೆರೆಹಿಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಪೊಲೀಸರು ಶಂಕಿತನನ್ನು ಗುರುತಿಸಿದ್ದಾರೆ. ನರ್ಸ್ ಕದ್ದ ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಿದ್ದು, ಧರ್ಮೇಂದ್ರನ ಸುಳಿವು ಸಿಕ್ಕಿದೆ. ವಿಚಾರಣೆ ವೇಳೆ ಧರ್ಮೇಂದ್ರ ನರ್ಸ್ ದರೋಡೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಖಾಲಿ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.