ಇತ್ತೀಚಿನ ದಿನಗಳಲ್ಲಿ ಚಾಕೊಲೇಟ್ ಮತ್ತು ಬಿಸ್ಕತ್ತುಗಳಂತಹ ಪ್ಯಾಕ್ಡ್ ಆಹಾರಗಳಲ್ಲಿ ಕೀಟಗಳು ಕಂಡುಬರುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಇದರ ಮಧ್ಯೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಟೋಫಿ ಗಂಟಲಿಗೆ ಸಿಲುಕಿ 4 ವರ್ಷದ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಭಾನುವಾರ (ನವೆಂಬರ್ 3) ಸಂಜೆ ಬರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ರಾ ಜರೌಲಿ ಹಂತ-1 ರಲ್ಲಿ ಈ ಘಟನೆ ನಡೆದಿದ್ದು, ಟೋಫಿಯಾದ ಫ್ರೂಟೊಲಾ ಕ್ಯಾಂಡಿಯನ್ನು ಮಗು ತಿನ್ನುತ್ತಿತ್ತು, ಅದು ಗಂಟಲಿಗೆ ಸಿಲುಕಿಕೊಂಡಿದೆ.
ಇದನ್ನು ಗಮನಿಸಿದ ಬಾಲಕನ ತಾಯಿ ಸೋನಾಲಿಕಾ ಮಗುವಿಗೆ ನೀರು ಕೊಟ್ಟಿದ್ದು, ಇದರಿಂದಾಗಿ ಕ್ಯಾಂಡಿ ಮಗುವಿನ ಗಂಟಲಿನ ಕೆಳಗೆ ಜಾರಿದೆ. ಇದರಿಂದ ಮಗುವಿನ ಉಸಿರಾಟಕ್ಕೆ ಸಮಸ್ಯೆಯಾಗಿದ್ದು,ಕೂಡಲೇ ಕುಟುಂಬದ ಸದಸ್ಯರು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಅಲ್ಲಿ ವೈದ್ಯರಿಗೆ ಗಂಟಲಿನಿಂದ ಕ್ಯಾಂಡಿಯನ್ನು ತೆಗೆಯಲು ಸಾಧ್ಯವಾಗಲಿಲ್ಲ.
ಬಳಿಕ ಬಾಲಕನನ್ನು ಸುಮಾರು ಮೂರ್ನಾಲ್ಕು ಆಸ್ಪತ್ರೆಗಳಿಗೆ ಕರೆದೊಯ್ದಲಾಗಿದ್ದು, ಸಕಾಲಕ್ಕೆ ಮಗುವಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಕ್ಯಾಂಡಿ ಗಂಟಲಿಗೆ ಸಿಲುಕಿದ್ದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಸುಮಾರು ಮೂರು ಗಂಟೆಗಳ ಕಾಲ ಒದ್ದಾಡಿದ ಮಗು ದುರಂತವಾಗಿ ತನ್ನ ಪ್ರಾಣ ಕಳೆದುಕೊಂಡಿತು. ಮೃತ ಮಗುವಿನ ಕುಟುಂಬಸ್ಥರು ಟೋಫಿ ತಯಾರಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.