
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ 16 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಯುವಜನರು ಮತ್ತು ವೈದ್ಯಕೀಯ ತಜ್ಞರಲ್ಲಿ ಘಟನೆ ಆತಂಕ ಮೂಡಿಸಿದೆ. 16 ವರ್ಷದ ಸಕ್ರಿಯ ಬಾಲಕ ಇನ್ನಿಲ್ಲ ಎನ್ನುವುದನ್ನು ಜನ ನಂಬಲು ಸಾಧ್ಯವಿಲ್ಲ. ಬಾಲಕ ಹೃದಯಾಘಾತಕ್ಕೆ ಒಳಗಾದಾಗ ತನ್ನ ಮೊಬೈಲ್ ಫೋನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದ. ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಅಮ್ರೋಹಾದ ಸೈದಂಗಲಿ ಪ್ರದೇಶದ 16 ವರ್ಷದ ದಿಲ್ಶಾದ್ ಖುರೇಷಿ 11 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಭಾನುವಾರ ಮಧ್ಯಾಹ್ನ ಮನೆಯಲ್ಲಿ ಮೊಬೈಲ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದನು.
ಇದ್ದಕ್ಕಿದ್ದಂತೆ ಎದೆಯಲ್ಲಿ ನೋವು ಕಾಣಿಸಿಕೊಂಡು ಮಂಚದಿಂದ ಬಿದ್ದಿದ್ದಾನೆ. ದಿಲ್ಶಾದ್ ಕುಟುಂಬಸ್ಥರು ಧಾವಿಸಿ ಬಂದು ಗಮನಿಸಿದಾಗ ಬಾಲಕನಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದಾರೆ. ದಿಲ್ಶಾದ್ ದಿಢೀರ್ ಸಾವಿನಿಂದ ಕುಟುಂಬ ಸದಸ್ಯರು ದಿಗ್ಭ್ರಮೆಗೊಂಡಿದ್ದಾರೆ. ಗ್ರಾಮಸ್ಥರು ಕೂಡ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದಾರೆ.
ಏ. 21ರಂದು ಭಾನುವಾರ ಘಟನೆ ನಡೆದಿದೆ. ಬಾಲಕನ ಕುಟುಂಬ ಮತ್ತು ಗ್ರಾಮದವರು ಆಘಾತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಚಿಕ್ಕ ಹುಡುಗ ತಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲು ಅವರಿಗೆ ಸಾಧ್ಯವಾಗುತ್ತಿಲ್ಲ. 16 ವರ್ಷದ ದಿಲ್ಶಾದ್ ಖುರೇಷಿ ಆರೋಗ್ಯವಾಗಿದ್ದ. ದುರಂತ ಘಟನೆಗೆ ಮೊದಲು ಯಾವುದೇ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸಲಿಲ್ಲ.
ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ
ಇತ್ತೀಚೆಗೆ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ. ಯುವಕರು ಹೃದಯಾಘಾತದಿಂದ ಕುಸಿದು ಬಿದ್ದು ಸಾಯುತ್ತಿರುವುದನ್ನು ತೋರಿಸುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹಿಂದೆ ವಯಸ್ಸಾದವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸುತ್ತೆ ಎಂದು ನಂಬಲಾಗಿತ್ತು, ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಯುವಕರೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಬದಲಾಗುತ್ತಿರುವ ಜೀವನಶೈಲಿ, ಸಮತೋಲಿತ ಆಹಾರದ ಕೊರತೆ, ಕುಳಿತುಕೊಳ್ಳುವ ಶೈಲಿ ಮತ್ತು ಒತ್ತಡದಂತಹ ಹಲವಾರು ಅಂಶಗಳು ಈ ಸಮಸ್ಯೆಗೆ ಕಾರಣವಾಗಿವೆ ಎಂದು ತಜ್ಞರು ಹೇಳುತ್ತಾರೆ.