ಬೆಂಗಳೂರು: ಬರೋಬ್ಬರಿ 643 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಕ್ಕೆ 3.22 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ಇಷ್ಟು ಮೊತ್ತದ ದಂಡ ವಿಧಿಸಿರುವುದು ಇದೆ ಮೊದಲು.
30,000 ರೂ. ಮೌಲ್ಯದ ದ್ವಿಚಕ್ರ ವಾಹನಕ್ಕೆ 3.22 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೆಎ 04. ಕೆಎಫ್ 9072 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನ 643 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದು, ಪ್ರಸ್ತುತ ದ್ವಿಚಕ್ರ ವಾಹನವೊಂದರ ವಿರುದ್ಧ ದಾಖಲಾದ ಅತಿ ಹೆಚ್ಚು ಪ್ರಕರಣ ಮತ್ತು ವಿಧಿಸಲಾದ ದಾಖಲೆಯ ಅತಿಹೆಚ್ಚಿನ ದಂಡದ ಮೊತ್ತ ಇದಾಗಿದೆ ಎಂದು ಹೇಳಲಾಗಿದೆ.
ಆರ್‌ಟಿ ನಗರದ ಗಂಗಾನಗರ ನಿವಾಸಿ ಮಾಲಾ ಎಂಬುವರ ಹೆಸರಿನಲ್ಲಿರುವ ದ್ವಿಚಕ್ರವಾಹನ ಆರ್.ಟಿ. ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದೆ. ಸವಾರ ಹೆಲ್ಮೆಟ್ ಧರಿಸದೆ ಚಾಲನೆ ಮಾಡಿರುವುದು, ಸಿಗ್ನಲ್ ಜಂಪ್, ಜೀಬ್ರಾ ಲೈನ್ ಕ್ರಾಸ್ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ.
ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿರುವ ಅತಿ ಹೆಚ್ಚು ಪ್ರಕರಣ ದಾಖಲಾಗಿವೆ. ಸಂಚಾರ ಠಾಣೆ ಪೊಲೀಸರು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಳವಡಿಸಿದ್ದ ಅತ್ಯಾಧುನಿಕ ತಂತ್ರಜ್ಞಾನದ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಕ್ಯಾಮೆರಾಗಳಲ್ಲಿ ಈ ದ್ವಿಚಕ್ರ ವಾಹನ ಸಂಚಾರ ನಿಯಮ ಉಲ್ಲಂಘನೆ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ದಂಡ ವಿಧಿಸಿ ಕ್ರಮಕೈಗೊಂಡಿದ್ದಾರೆ.