ಬೆಂಗಳೂರು: ಸಂಚಾರಿ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಿದ್ದರೆ ಅಂತಹ ವಾಹನ ಸವಾರರ ಡ್ರೈವಿಂಗ್ ಲೈಸನ್ಸ್ ಅಮಾನತು ಮಾಡಲು ಸೂಚನೆ ನೀಡಲಾಗಿದೆ.
ಇದು ಕೇವಲ ರಾಜಧಾನಿ ಬೆಂಗಳೂರು ವಾಹನ ಸವಾರರಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೂ ಅನ್ವಯವವಾಗಲಿದೆ. ಈಗಾಗಲೇ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ದಂಡ ಪ್ರಯೋಗವನ್ನು ಮಾಡುತಿದ್ದಾರೆ. ಆದಾಗ್ಯೂ ಕೆಲ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಡಿಎಲ್ ಅಮಾನತು ಮಾಡಲು ಸೂಚಿಸಲಾಗಿದೆ. ಈಗಾಗಲೇ 2974 ಡ್ರೈವಿಂಗ್ ಲೈಸನ್ಸ್ ಅಮಾನತಿಗೆ ಸಂಚಾರಿ ಪೊಲೀಸರು ಸೂಚಿಸಿದ್ದು, ಈ ನಿಟ್ಟಿನಲ್ಲಿ ಬೇರೆ ಬೇರೆ ಜಿಲ್ಲಾ ಸಾರಿಗೆ ಕಚೇರಿಗಳಿಗೆ ರವಾನಿಸಲಾಗಿದೆ.
ಈಗಾಗಲೇ 711ಜನರ ಲೈಸನ್ಸ್ ಅಮಾನತುಗೊಂಡಿದೆ. ಇನ್ನೂ 2263 ಜನರ ಲೈಸನ್ಸ್ ಅಮಾನತು ಪ್ರಕ್ರಿಯೆ ನಡೆಯುತ್ತಿದೆ. ಸಂಚಾರಿ ನಿಯಮ ಉಲ್ಲಂಘನೆಯಿಂದಾಗಿ ಅಪಘಾತದಂತಹ ಪ್ರಕರಣಗಳು ಹೆಚ್ಚುತ್ತಿವೆ. ಹಲವರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.