ಪುಣೆ: ಪುಣೆಯ ನಾನಾಪೇಠ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ಸವಾರನ ಸಮೇತ ಬೈಕ್ ಎತ್ತಿಕೊಂಡು ಹೋಗಿದ್ದಾರೆ.
ಯುವಕರು ಬೈಕ್ ಮೇಲಿದ್ದಾಗಲೇ ಕ್ರೇನ್ ಬಳಸಿ ಬೈಕ್ ಎತ್ತಿದ್ದು ಗಾಳಿಯಲ್ಲಿ ನೇತಾಡುತ್ತಿದ್ದಾನೆ. ಆಘಾತಕಾರಿ ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಪರಿಶೀಲನೆಗೆ ಸೂಚನೆ ನೀಡಿದ್ದಾರೆ.
ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಸವಾರನ ಸಮೇತ ಸಂಚಾರ ಪೊಲೀಸರ ವಾಹನದಲ್ಲಿ ಎಳೆದೊಯ್ದಿದ್ದಾರೆ. ಘಟನೆಯ ಫೋಟೋಗಳು ಹೊರಬಂದ ನಂತರ ಸಂಚಾರ ವಿಭಾಗದ ಅಧಿಕಾರಿಗಳು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಟ್ರಾಫಿಕ್ ವಿಭಾಗ ಪ್ರಕಾರ, ಬೈಕ್ ಅನ್ನು ‘ನೋ-ಪಾರ್ಕಿಂಗ್ ವಲಯ’ದಲ್ಲಿ ನಿಲ್ಲಿಸಲಾಗಿತ್ತು. ಬೈಕ್ ವಾಹನಕ್ಕೆ ಹಾಕುವಾಗ ಸವಾರ ಉದ್ದೇಶಪೂರ್ವಕವಾಗಿ ಅದರ ಮೇಲೆ ಕುಳಿತುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ಇಲಾಖೆ ಕಾರ್ಯವೈಖರಿಯ ಬಗ್ಗೆ ತಮ್ಮ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬೈಕ್ ನೋ ಪಾರ್ಕಿಂಗ್ ಜಾಗದಲ್ಲಿರಲಿಲ್ಲ, ಎರಡು ನಿಮಿಷಗಳ ಕಾಲ ರಸ್ತೆ ಬದಿಯಲ್ಲಿ ಯುವಕ ನಿಂತಿದ್ದ. ನಾನೇನು ಕಾರ್ ನಿಲ್ಲಿಸಿಲ್ಲ, ತಕ್ಷಣ ಹೊರಡುತ್ತಿದ್ದೇನೆ, ದಯವಿಟ್ಟು ಕ್ರಮ ಕೈಗೊಳ್ಳಬೇಡಿ ಎಂದರೂ ಟ್ರಾಫಿಕ್ ಪೊಲೀಸರು ನಿರಾಕರಿಸಿ ಬೈಕಿನೊಂದಿಗೆ ಯುವಕನನ್ನು ಎತ್ತಿಕೊಂಡರು ಎಂದು ಆರೋಪಿಸಲಾಗಿದೆ.
ಆ ವ್ಯಕ್ತಿ ತಾನು ಬೈಕ್ ಅನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿಲ್ಲ ಎಂದು ಪದೇ ಪದೇ ಹೇಳಿದರೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನಿರಾಕರಿಸಿದ್ದಾರೆ. ಘಟನೆಯ ವಿಡಿಯೋ ಹೊರ ಬಂದ ನಂತರ, ಯುವಕನ ತಪ್ಪೇನಿದ್ದರೂ ಆತನನ್ನು ಈ ರೀತಿ ಬೈಕಿನೊಂದಿಗೆ ಎತ್ತಿಕೊಂಡು ಹೋಗುವುದು ಸರಿಯೇ ಎಂಬ ಜನ ಪ್ರಶ್ನಿಸಿದ್ದಾರೆ. ಅವನು ಬಿದ್ದರೆ, ಅದಕ್ಕೆ ಯಾರು ಹೊಣೆ? ಎಂದು ಕೇಳಲಾಗಿದೆ.