ಬೆಂಗಳೂರು: ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ ಮಾಡಲಾಗಿದೆ. ಈ ನಾಳೆ ಈ ಬಗ್ಗೆ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ವೀರಪ್ಪ ಮಾಹಿತಿ ನೀಡಿ, ಟ್ರಾಫಿಕ್ ಫೈನ್ ರಿಯಾಯಿತಿ ವಿಸ್ತರಿಸಬೇಕೆಂದು ಜನಸಾಮಾನ್ಯರಿಂದ ಬೇಡಿಕೆ ಇದೆ. ಸಾರಿಗೆ ಇಲಾಖೆಯಿಂದಲೂ ಈ ಸಂಬಂಧ ಪತ್ರ ಬಂದಿದೆ. ಸಿಜೆ ಪ್ರಸನ್ನ ಬಿ. ವರಾಳೆ ಸಹ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಾಳೆ ಈ ಬಗ್ಗೆ ಅಧಿಕೃತವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಲಾಗಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೂರಾರು ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಅನೇಕ ದಿನಗಳಿಂದ ದಂಡ ಬಾಕಿ ಉಳಿಸಿಕೊಂಡವರು ರಿಯಾಯಿತಿ ಸೌಲಭ್ಯ ಪಡೆದು ದಂಡ ಪಾವತಿಸತೊಡಗಿದ್ದಾರೆ. ಜನಸಾಮಾನ್ಯರಿಂದ ದಂಡ ರಿಯಾಯಿತಿ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಮತ್ತೆ ಎರಡು ವಾರ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.