ನವದೆಹಲಿ: ಸಂಸತ್ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಫೆಬ್ರವರಿ 23 ಮತ್ತು 24 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.
ಕೇಂದ್ರ ಟ್ರೇಡ್ ಯೂನಿಯನ್‌ಗಳು ಮತ್ತು ಸ್ವತಂತ್ರ ವಲಯದ ಅಖಿಲ ಭಾರತ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆಯು ದೆಹಲಿಯಲ್ಲಿ ಸಭೆ ನಡೆಸಿ ಮುಷ್ಕರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಫೆ. 23-24 ರಂದು ದೇಶಾದ್ಯಂತ 2 ದಿನಗಳ ಸಾರ್ವತ್ರಿಕ ಮುಷ್ಕರದ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ಮತ್ತು ದೇಶ ವಿರೋಧಿ ನೀತಿಗಳ ವಿರುದ್ಧ ಮುಷ್ಕರ ಕೈಗೊಳ್ಳಲಾಗಿದೆ.
ಮುಷ್ಕರದ ಪ್ರಮುಖ ಘೋಷವಾಕ್ಯ ‘ಜನರನ್ನು ಉಳಿಸಿ ಮತ್ತು ರಾಷ್ಟ್ರವನ್ನು ಉಳಿಸಿ’ ಎಂದಾಗಿದೆ. ಕೇಂದ್ರ ಕಾರ್ಮಿಕ ಸಂಘಗಳು – INTUC, AITUC, HMS, CITU, AIUTUC, TUCC, SEWA, AICCTU, LPF ಮತ್ತು UTUC – ಈ ಜಂಟಿ ವೇದಿಕೆಯ ಭಾಗವಾಗಿವೆ.
ಇತರ ಬೇಡಿಕೆಗಳೆಂದರೆ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು, ಎನ್‌ಪಿಎಸ್ ರದ್ದತಿ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಹಳೆಯ ಪಿಂಚಣಿ ಮರುಸ್ಥಾಪನೆ; ನೌಕರರ ಪಿಂಚಣಿ ಯೋಜನೆಯಡಿಯಲ್ಲಿ ಕನಿಷ್ಠ ಪಿಂಚಣಿಯಲ್ಲಿ ಗಣನೀಯ ಹೆಚ್ಚಳ ಮಾಡಬೇಕೆಂಬುದಾಗಿದೆ.
ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರವೂ SKM ನ ಹೋರಾಟಗಳಿಗೆ ತನ್ನ ನಿರಂತರ ಬೆಂಬಲ ನೀಡುವುದನ್ನು ಟ್ರೇಡ್ ಯೂನಿಯನ್‌ಗಳು ಮತ್ತು ಫೆಡರೇಶನ್‌ಗಳ ಜಂಟಿ ವೇದಿಕೆ ಮುಂದುವರೆಸಲಿದೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಡಿಸೆಂಬರ್ 16-17, 2021 ರಂದು ಎರಡು ದಿನಗಳ ದೇಶವ್ಯಾಪಿ ಮುಷ್ಕರ ಕೈಗೊಂಡಿರುವುದನ್ನು ಮತ್ತು ಖಾಸಗೀಕರಣ ವಿರುದ್ಧ 2021 ರ ಫೆಬ್ರವರಿ 1 ರಂದು ವಿದ್ಯುತ್ ನೌಕರರ ಜಂಟಿ ವೇದಿಕೆ ಮುಷ್ಕರ ಕೈಗೊಂಡ ನಿರ್ಧಾರವನ್ನು ಜಂಟಿ ವೇದಿಕೆಯು ಸ್ವಾಗತಿಸಿದ್ದು, ಹೋರಾಟಗಳಿಗೆ ಬೆಂಬಲಿಸಿದೆ.