
ನವದೆಹಲಿ: ಖಾಸಗೀಕರಣದ ವಿರುದ್ಧ ಧ್ವನಿ ಎತ್ತಿದ ಕಾರ್ಮಿಕ ಸಂಘಟನೆಗಳು ಮೇ 20ರಂದು ಮುಷ್ಕರಕ್ಕೆ ಕರೆ ನೀಡಿವೆ.
ಸರ್ಕಾರಿ ಸಂಸ್ಥೆಗಳ ಖಾಸಗಿಕರಣ ನಿಲ್ಲಿಸಬೇಕು ಎಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 20ರಂದು ದೇಶವ್ಯಾಪಿ ಮುಷ್ಕರ ನಡೆಸಲು ವಿವಿಧ ಕಾರ್ಮಿಕ ಸಂಘಟನೆಗಳು ಮುಂದಾಗಿವೆ. ಇದಕ್ಕೆ ಪೂರ್ವಭಾವಿಯಾಗಿ ಎರಡು ತಿಂಗಳ ಕಾಲ ಜಾಗೃತಿ ಅಭಿಯಾನ ನಡೆಸಲಾಗುವುದು.
ಕಾರ್ಮಿಕರ ರಾಷ್ಟ್ರೀಯ ಸಮಾವೇಶದಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದ್ದು, ಐಟಕ್, ಇಂಟಕ್, HMS, CITU, AIUTUC, LPF, UTUC ಸೇರಿ ಹಲವು ಸಂಘಟನೆಗಳು ಇದಕ್ಕೆ ಬೆಂಬಲ ನೀಡಿವೆ. 26 ಸಾವಿರ ರೂಪಾಯಿ ಮಾಸಿಕ ಕನಿಷ್ಠ ವೇತನ, 9 ಸಾವಿರ ರೂ. ಕನಿಷ್ಠ ಪಿಂಚಣಿ ನಿಗದಿಪಡಿಸಬೇಕು. ಭಾರತೀಯ ಕಾರ್ಮಿಕ ಸಮಾವೇಶವನ್ನು ನಿಗದಿತ ಕಾಲಾವಧಿಯಲ್ಲಿ ನಡೆಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.