ಬೆಂಗಳೂರು: ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಶಾಸಕರು ನಡೆಸಿದ ಸಭೆಯಲ್ಲಿ ಇಂತಹುದೊಂದು ಪ್ರಸ್ತಾಪ ಕೇಳಿಬಂದಿದ್ದು, ರಾಜ್ಯದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥೆ ರದ್ದುಗೊಳಿಸಲು ಕಾನೂನು ತಿದ್ದುಪಡಿ ತರುವಂತೆ ಸಲಹೆ ನೀಡಲಾಗಿದೆ ಎಂದು ಹೇಳಲಾಗಿದೆ.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಹೀಗೆ ಮೂರು ಸ್ತರದ ವ್ಯವಸ್ಥೆಗಳಿದ್ದರೂ ತಾಲೂಕು ಪಂಚಾಯಿತಿಗೆ ಯಾವುದೇ ಅನುದಾನ ಮತ್ತು ನಿರ್ದಿಷ್ಟ ಕೆಲಸ ಇಲ್ಲದಂತಾಗಿದೆ. ಅನಗತ್ಯವಾಗಿರುವ ಈ ವ್ಯವಸ್ಥೆಯಿಂದ ಆರ್ಥಿಕ ಹೊರೆಯಾಗುತ್ತದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಸಂವಿಧಾನದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಲ್ಲಿ ಮೂರು ಹಂತದ ಪಂಚಾಯಿತಿ ವ್ಯವಸ್ಥೆ ಇರಬೇಕೆಂದು ಹೇಳಿದೆ. ವ್ಯವಸ್ಥೆಯನ್ನು ಬದಲಾವಣೆ ಮಾಡಲು ರಾಜ್ಯಗಳಿಗೆ ಅಧಿಕಾರ ವಿಲ್ಲವೆನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಪಂಚಾಯತ್ ರಾಜ್ ಕಾಯ್ದೆಯಲ್ಲಿ ತಾಪಂ ಕೈಬಿಡಲು ಅವಕಾಶವಿದೆ ಎನ್ನಲಾಗಿದ್ದು, ಕಾನೂನು ತಿದ್ದುಪಡಿ ತರುವಂತೆ ಸಲಹೆ ನೀಡಲಾಗಿದೆ.