ಹಾವೇರಿ: ಬೇಜವಾಬ್ದಾರಿ ವರ್ತನೆ, ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ವರ್ತಿಸಿ ದುರ್ನಡತೆ ತೋರಿದ ಆರೋಪದ ಮೇಲೆ ಹಾವೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ ಅವರನ್ನು ಸೇವೆಯಿಂದ ಅಮಾನತು ಮಾಡಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ಭರತ್ ಹೆಗಡೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ್ ಶ್ರೀಧರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತಾವನೆ ಆಧರಿಸಿ ಭರತ್ ಹೆಗಡೆ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ದಾಂಡೇಲಿ ತಾಲೂಕು ಪಂಚಾಯಿತಿಗೆ ಭರತ್ ಹೆಗಡೆ ಅವರನ್ನು ವರ್ಗಾವಣೆ ಮಾಡಿ ಜುಲೈ 29ರಂದು ಆದೇಶ ಹೊರಡಿಸಿದ್ದು, 30ರಂದು ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ವರ್ಗಾವಣೆ ಆದೇಶ ಪ್ರಶ್ನಿಸಿದ್ದ ಅವರು ಕೆಎಟಿ ಯಿಂದ ತಡೆಯಾಜ್ಞೆ ತಂದಿದ್ದರು. ಮೇಲಾಧಿಕಾರಿಗಳ ಗಮನಕ್ಕೆ ತರದೆ ಆಗಸ್ಟ್ 1ರಂದು ಪುನಃ ಹುದ್ದೆ ಅಲಂಕರಿಸಿದ್ದರು.
ಹಾವೇರಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರಕೃತಿ ವಿಕೋಪ ಉಂಟಾಗಿ ಮನೆಗಳು ಹಾಳಾಗಿವೆ. ಜಮೀನುಗಳಲ್ಲಿ ರೈತರ ಬೆಳೆಗಳು ಜಲಾವೃತಗೊಂಡಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿರದೆ ಕರ್ತವ್ಯ ಲೋಪ ಎಸಗಿದ್ದರು. ಕೆಡಿಪಿ ಸಭೆಗೆ ಗೈರು ಹಾಜರಾಗಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಇದಕ್ಕೂ ಅವರು ಸಮಂಜಸ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಭರತ್ ಹೆಗಡೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.