ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಕಂಪನಿ ತನ್ನ 3ನೇ ಘಟಕವನ್ನು ಕರ್ನಾಟಕದ ಬದಲು ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಮುಂದಾಗಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಕಿಡಿಕಾರಿದೆ.
ಬಿಜೆಪಿ ಆಡಳಿತದ ಅವಧಿಯಲ್ಲಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿತ್ತು. ಇದೀಗ ಆ ಸ್ಥಾನವನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುತ್ತಿದೆ. ಜತೆಗೆ 21 ಸಾವಿರ ಕೋಟಿ ರೂ.ಗಳ ಬೃಹತ್ ಉದ್ಯಮವನ್ನು ಕೈ ಚೆಲ್ಲಿದೆ ಎಂದು ವಾಗ್ದಾಳಿ ನಡೆಸಿದೆ.
ಮುಷ್ಕರ, ಪ್ರತಿಭಟನೆ, ಮೂಲಭೂತ ಸೌಕರ್ಯಗಳ ಕೊರತೆ, ಟ್ರಾಫಿಕ್ ಸಮಸ್ಯೆ, ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ಕಿರಿಕಿರಿಯಿಂದಾಗಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಮೂರನೇ ಹಂತದ ಉತ್ಪಾದನಾ ಘಟಕವನ್ನು ಕರ್ನಾಟಕದ ಬದಲಿಗೆ ಮಹಾರಾಷ್ಟ್ರದಲ್ಲಿ ಸ್ಥಾಪಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಿಣಾಮ ಸಾವಿರಾರು ಕನ್ನಡಿಗರು ಉದ್ಯೋಗ ಅವಕಾಶದಿಂದ ವಂಚಿತರಾಗಿದ್ದಾರೆ. ಸರ್ಕಾರದ ಬೊಕ್ಕಸಕ್ಕೂ ಕತ್ತರಿ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.