ಬೆಂಗಳೂರು: ಟೋಯಿಂಗ್ ವಿಚಾರದಲ್ಲಿ ಸಾರ್ವಜನಿಕರಿಂದ ಗಲಾಟೆ ಹಿನ್ನೆಲೆಯಲ್ಲಿ ಇಂದು ಟೋಯಿಂಗ್ ವ್ಯವಸ್ಥೆ ಪರಿಷ್ಕರಣೆ ಕುರಿತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಟೋಯಿಂಗ್ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗುವುದು ಎಂದು ಸಿಎಂ ಹೇಳಿದ್ದಾರೆ. ಪಾರ್ಕಿಂಗ್ ನಿಯಮ ಉಲ್ಲಂಘಿಸುವ ವಾಹನಗಳನ್ನು ಪೊಲೀಸರು ಹೊತ್ತೊಯ್ಯುವ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ವ್ಯವಸ್ಥೆಗೆ ಹೊಸ ರೂಪ ನೀಡಲು ಸಿಎಂ ಮುಂದಾಗಿದ್ದಾರೆ.
ಟೋಯಿಂಗ್ ವ್ಯವಸ್ಥೆಯನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದ್ದು, ಜನಸ್ನೇಹಿಯಾಗಿ ವ್ಯವಸ್ಥೆ ಪರಿಷ್ಕರಿಸಲಾಗುತ್ತದೆ. ನೋ ಪಾರ್ಕಿಂಗ್ ಫಲಕ ಇಲ್ಲದ ಜಾಗದಲ್ಲಿ ವಾಹನ ನಿಲ್ಲಿಸಿದರೂ ಪೊಲೀಸರು ಎತ್ತಿಕೊಂಡು ಹೋಗುತ್ತಿದ್ದಾರೆ. ಖಾಸಗಿ ಸಿಬ್ಬಂದಿ ಕಮಿಷನ್ ಆಸೆಗೆ ಕಂಡಕಂಡ ವಾಹನಗಳನ್ನು ಹೊತ್ತೊಯ್ಯುತ್ತಿದ್ದು, ದಂಡ ಹಾಕುವಲ್ಲಿ ಅಕ್ರಮ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಿ ಟೋಯಿಂಗ್ ಗೆ ಹೊಸ ರೂಪ ನೀಡಲಾಗುವುದು ಎನ್ನಲಾಗಿದೆ.