ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಅಭಾವ ಹಾಗೂ ಅಮೆರಿಕದಲ್ಲಿ ಹೆಚ್ಚಿದ ಕೊರೊನಾ ಲಸಿಕೆ ಉತ್ಪಾದನೆಯು ವಿಶ್ವದ ದೊಡ್ಡಣ್ಣನಿಗೆ ಹೊಸ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ದಾರಿ ಮಾಡಿಕೊಟ್ಟಿದೆ.
ವಿವಿಧ ದೇಶದ ಶ್ರೀಮಂತ ಪ್ರಜೆಗಳು ಕೊರೊನಾ ಲಸಿಕೆಯನ್ನು ಸ್ವೀಕರಿಸುವ ಸಲುವಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ಅಮೆರಿಕಕ್ಕೆ ಬಂದ ಮೇಲೆ ಕೇವಲ ಲಸಿಕೆಯೊಂದೇ ಸ್ವೀಕರಿಸಿ ಯಾರು ತಾನೇ ವಾಪಸ್ ಹೋಗ್ತಾರೆ..? ಲಸಿಕೆಗೆಂದು ಬಂದವರು ಅಮೆರಿಕದ ಮಾರುಕಟ್ಟೆಗಳಲ್ಲಿ ಕೆಲ ವಸ್ತುಗಳನ್ನು ಖರೀದಿ ಮಾಡಿ ಬಳಿಕ ಸ್ವಂತ ದೇಶಕ್ಕೆ ಮರಳುತ್ತಿದ್ದಾರೆ.
‘ಲಸಿಕೆ ಪ್ರವಾಸ’ ಯೋಜನೆಯು ಎಸ್ಎಫ್ಓ ಮೆಡಿಕಲ್ ಕ್ಲಿನಿಕ್ಗೆ ಸಂದರ್ಶಕರ ಸಂಖ್ಯೆಯನ್ನು ಹೆಚ್ಚಿಸಿದೆ. ಇಲ್ಲಿ ಜಾನ್ಸನ್ & ಜಾನ್ಸನ್ ಕಂಪನಿಯ ಸಿಂಗಲ್ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗ್ತಿದೆ ಎಂದು ಸ್ಯಾನ್ ಫ್ರಾನ್ಸಿಸ್ಕೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ. ಕ್ಯಾಲಿಫೋರ್ನಿಯಾದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಲಸಿಕೆ ಪ್ರವಾಸೋದ್ಯಮದ ಬಗ್ಗೆ ದತ್ತಾಂಶ ಬಿಡುಗಡೆ ಮಾಡಿದೆ.
ವಿವಿಧ ದೇಶಗಳಿಂದ ಅಮೆರಿಕಕ್ಕೆ ಬರುವ ಶ್ರೀಮಂತ ಪ್ರಜೆಗಳು ಇಲ್ಲಿ ಲಸಿಕೆಯನ್ನು ಸ್ವೀಕರಿಸುತ್ತಿದ್ದಾರೆ. ಎಸ್ಎಫ್ಓದಲ್ಲಿ ಲಸಿಕೆಗಾಗಿ ಬುಕ್ಕಿಂಗ್ ಮಾಡಿದವರಲ್ಲಿ 80 ಪ್ರತಿಶತ ಮಂದಿ ವಿದೇಶದವರೇ ಆಗಿದ್ದಾರೆ. ಈಗಾಗಲೇ 58 ದೇಶದ ಪ್ರಜೆಗಳಿಗೆ 1000 ಡೋಸ್ ವಿತರಿಸಲಾಗಿದೆ ಎಂದು ಏರ್ಪೋರ್ಟ್ ಮಾಹಿತಿ ನೀಡಿದೆ.
ಈ 1000 ಮಂದಿಯಲ್ಲಿ ಕೇವಲ 8 ಮಂದಿ ಮಾತ್ರ ಭಾರತೀಯರಾಗಿದ್ದಾರೆ. ಈ ಲಸಿಕಾ ಪ್ರವಾಸೋದ್ಯಮದಲ್ಲಿರುವ ಟಾಪ್ 5 ದೇಶಗಳು ಮೆಕ್ಸಿಕೋ, ತೈವಾನ್, ಪಿಲಿಫೈನ್ಸ್, ದಕ್ಷಿಣ ಕೊರಿಯಾ ಹಾಗೂ ಪೆರುವಿನವರಾಗಿದ್ದಾರೆ. ಅಮೆರಿಕವು ಭಾರತಕ್ಕೆ ಪ್ರಯಾಣ ನಿರ್ಬಂಧವನ್ನು ಹೆಚ್ಚಿಸಿರೋದು ಭಾರತೀಯರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.