ಸಾಹಸ ಚಟುವಟಿಕೆಗಳು ಹೆಚ್ಚಿನ ಮೋಜು ನೀಡುವುದರ ಜೊತೆಗೆ ಕೆಲವೊಮ್ಮೆ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತವೆ. ಬಂಗೀ ಜಂಪಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಪ್ರವಾಸಿಗನ ಪ್ರಾಣಕ್ಕೇ ಕುತ್ತು ಬಂದ ಘಟನೆ ಥಾಯ್ಲೆಂಡ್ ನಲ್ಲಿ ನಡೆದಿದೆ.
ಹಾಂಗ್ ಕಾಂಗ್‌ನ 39 ವರ್ಷದ ಪ್ರವಾಸಿ ಮೈಕ್ ಇತ್ತೀಚೆಗೆ ಥಾಯ್ಲೆಂಡ್‌ನ ಪಟ್ಟಾಯದಲ್ಲಿರುವ ಚಾಂಗ್‌ಥಾಯ್ ಥಪ್ಪರಾಯ ಅಡ್ವೆಂಚರ್ ಪಾರ್ಕ್‌ಗೆ ಭೇಟಿ ನೀಡಿದ್ದರು.
ತನ್ನ ಸ್ನೇಹಿತರಿಂದ ಸವಾಲು ಸ್ವೀಕರಿಸಿದ ನಂತರ ಅವರು ಬಂಗೀ ಜಂಪಿಂಗ್ ಮಾಡಲು ನಿರ್ಧರಿಸಿದರು. ಜಂಪಿಂಗ್ ವೇಳೆ ಪ್ರವಾಸಿಗರು ಗಾಳಿಯಲ್ಲಿದ್ದಾಗ ಸುರಕ್ಷತಾ ಹಗ್ಗ ತುಂಡಾಗಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ನೀರಿನಿಂದ ಸುಮಾರು ಐದು ಮೀಟರ್ ದೂರದಲ್ಲಿರುವಾಗ ಪ್ರವಾಸಿಗ ಕೆರೆಗೆ ಬಿದ್ದಿದ್ದಾರೆ.
ಅಪಘಾತವು ಹೆಚ್ಚು ಗಂಭೀರವಾಗಿದ್ದರೆ ಅವರು ತಮ್ಮ ಪ್ರಾಣವನ್ನೆ ಕಳೆದುಕೊಳ್ಳುತ್ತಿದ್ದರು.
ನೀರಿನೊಳಕ್ಕೆ ಬಿದ್ದ ಕೆಲವು ಸೆಕೆಂಡುಗಳ ಕಾಲ ಮೂರ್ಛೆ ಹೋದರು. ತಕ್ಷಣ ಪ್ರಜ್ಞೆ ಮರಳಿ ಪಡೆದ ಅವರು ಅಲ್ಲಿನ ನೌಕರರ ಸಹಾಯದಿಂದ ಈಜಿ ದಡ ಸೇರಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.