ಬೆಂಗಳೂರು: ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಪುನಾರಂಭಕ್ಕೆ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಡಿಸೆಂಬರ್ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. ಡಿಸೆಂಬರ್ ನಂತರ ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಪೋಷಕರ ಒಪ್ಪಿಗೆಯೊಂದಿಗೆ ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಬೇಕು ಎಂದು ಹೇಳಲಾಗಿದೆ.
ರಾಜ್ಯ ಸಾರಿಗೆ ಸಂಸ್ಥೆ, ರಾಜ್ಯ ಪ್ರವಾಸೋದ್ಯಮ ಇಲಾಖೆ ವಾಹನಗಳನ್ನು ಪ್ರವಾಸಕ್ಕೆ ಬಳಸಬೇಕು. ಖಾಸಗಿ ಹಾಗೂ ಮಿನಿ ಬಸ್ ಗಳನ್ನು ಬಳಸಬಾರದು. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಗಮನ ನೀಡಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ್ರವಾಸ ಕೈಗೊಂಡ ವಿದ್ಯಾರ್ಥಿನಿಯರ ಮೇಲ್ವಿಚಾರಣೆಗೆ ಮಹಿಳಾ ಶಿಕ್ಷಕರು ಇರಲೇಬೇಕು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಾನ್ಯತೆ ನವೀಕರಿಸಿಕೊಳ್ಳದ ಶಾಲೆಗಳು ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಂತಿಲ್ಲ. ಪ್ರವಾಸ ಕೈಗೊಂಡಲ್ಲಿ ಮುಂದಿನ ದಿನಗಳಲ್ಲಿ ಶನಿವಾರ ಪೂರ್ಣ ದಿನ ಅಥವಾ ಭಾನುವಾರ ಶಾಲೆ ನಡೆಸುವ ಮೂಲಕ ಕೊರತೆಯ ಪಠ್ಯ ಚಟುವಟಿಕೆ ಕಲಿಸಬೇಕು. ಪ್ರವಾಸದ ಸಂದರ್ಭದಲ್ಲಿ ಅವಘಡ ಉಂಟಾದರೆ ಮುಖ್ಯಸ್ಥರು ನೇರ ಹೊಣೆಗಾರರಾಗಿರುತ್ತಾರೆ. ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಹೇಳಲಾಗಿದೆ.