ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಕನಿಷ್ಠ 15 ದಿನಗಳ ಮೊದಲು ಪ್ರಸ್ತಾವನೆಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸುವಂತೆ ಇಲಾಖೆಯ ನಿರ್ದೇಶಕರು ಎಲ್ಲಾ ಪ್ರಾಂಶುಪಾಲರುಗಳಿಗೆ ಸೂಚನೆ ನೀಡಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಿಂದ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ಶೈಕ್ಷಣಿಕ ಪ್ರವಾಸಕ್ಕೆ ಅನುಮತಿ ಕೋರಿ ಕೊನೆ ಕ್ಷಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಪ್ರಾಂಶುಪಾಲರು ತಮ್ಮ ಕಾಲೇಜಿನ ಪ್ರಸ್ತಾವನೆಗಳನ್ನು ಪ್ರವಾಸಕ್ಕೆ ಅತಿ ಕಡಿಮೆ ಸಮಯ ಇರುವಾಗ ಕಳುಹಿಸುತ್ತಿರುವುದರಿಂದ ಕಚೇರಿ ಕಾರ್ಯಕ್ಕೆ ಅಡಚಣೆಯಾಗುತ್ತಿದೆ. ಪ್ರಸ್ತಾವನೆ ಪರಿಶೀಲನೆಗೆ ಹೆಚ್ಚಿನ ಸಮಯ ಬೇಕಾಗಿರುತ್ತದೆ. ಹೀಗಾಗಿ 15 ದಿನ ಮೊದಲೇ ಪ್ರಸ್ತಾವನೆ ಸಲ್ಲಿಸಬೇಕು. ತಪ್ಪಿದಲ್ಲಿ ಅಂತಹ ಪ್ರಸ್ತಾವನೆಗಳನ್ನು ಪರಿಗಣಿಸುವುದಿಲ್ಲ. ಮುಂದಿನ ಆಗುಹೋಗುಗಳಿಗೆ ಪ್ರಾಂಶುಪಾಲರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ.