ಪಣಜಿ: ಗೋವಾದ ದೀರ್ಘಕಾಲದ ಸಿಎಂ ಹಾಗೂ ಬರೋಬ್ಬರಿ 11 ಬಾರಿ ವಿಧಾನಸಭೆ ಪ್ರವೇಶಿಸಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಹಿರಿಯ ನಾಯಕ ಹಾಗೂ 87 ವರ್ಷದ ಪ್ರತಾಪ್ ಸಿಂಗ್ ರಾಣೆ ಪೊರಿಯಂ ಕ್ಷೇತ್ರದಿಂದ ಬರೋಬ್ಬರಿ 11 ಬಾರಿ ಗೆಲುವು ಸಾಧಿಸಿದ್ದರು. ಸದ್ಯ ಕಾಂಗ್ರೆಸ್ ಕೂಡ ಇದೇ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಿತ್ತು. ಆದರೆ, ಬಿಜೆಪಿಯು ಇದೇ ಕ್ಷೇತ್ರದಿಂದ ಅವರ ಸೊಸೆ ದಿವ್ಯ ವಿಶ್ವಜಿತ್ ರಾಣೆ ಅವರಿಗೆ ಟಿಕೆಟ್ ನೀಡಿದ್ದು, ಇದರ ಬೆನ್ನಲ್ಲಿಯೇ ಹಿರಿಯ ನಾಯಕ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.
ಗೋವಾದಲ್ಲಿ ಮತದಾನ ನಡೆಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಬಿಜೆಪಿಯು ತಂತ್ರ ರೂಪಿಸಿ, ಕಾಂಗ್ರೆಸ್ ನ ಹಿರಿಯ ನಾಯಕರ ವಿರುದ್ಧ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದೆ. ಹೀಗಾಗಿ ಮುಜುಗರದಿಂದಾಗಿ ಹಿಂದೆ ಸರಿದಿದ್ದಾರೆ. ಇದು ಕಾಂಗ್ರೆಸ್ ಗೂ ಹಿನ್ನಡೆಯಾಗುವಂತೆ ಮಾಡಿದೆ.
ರಾಣೆ ಅವರ ಪುತ್ರ ವಿಶ್ವಜಿತ್ ಅವರು ಕೂಡ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ, ಪ್ರತಾಪ್ ಅವರ ವಿರುದ್ಧ ಅವರ ಪುತ್ರನೇ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರಿಗೆ ವಾಲ್ಫೋಯ್ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದ್ದು, ಅವರ ಪತ್ನಿಗೆ ಪೊರಿಯಂ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಹಿರಿಯ ನಾಯಕರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಪುತ್ರ ವಿಶ್ವಜಿತ್ ಕೂಡ ಕಾಂಗ್ರೆಸ್ ನಲ್ಲಿಯೇ ಇದ್ದರು. ಆದರೆ, 2017ರಲ್ಲಿ ಬಿಜೆಪಿ ಸೇರಿ ಮಂತ್ರಿಯಾಗಿದ್ದರು. ಕಾಂಗ್ರೆಸ್ ನಲ್ಲಿ ಪಕ್ಷಾಂತರ ಪರ್ವ ಉಂಟಾದರೂ ಹಿರಿಯ ನಾಯಕ ಪ್ರತಾಪ್ ಸಿಂಗ್ ಮಾತ್ರ ತಮ್ಮ ನಿಷ್ಠೆಯಿಂದ ಹಿಂದೆ ಸರಿದಿರಲಿಲ್ಲ. ಆದರೆ, ಇದೀಗ ಸೊಸೆಯ ಸ್ಪರ್ಧೆಯಿಂದ ಕಣದಿಂದ ಹಿಂದೆ ಸರಿದಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಕುಟುಂಬದ ಒತ್ತಡದಿಂದಾಗಿ ಹಿಂದೆ ಸರಿದಿದ್ದೇನೆಯೇ ಹೊರತು, ಬಿಜೆಪಿಗೆ ಅನುಕೂಲವಾಗಲು ಅಲ್ಲ ಎಂದು ಹೇಳಿದ್ದಾರೆ. ಅವರ ನಿರ್ಧಾರದಿಂದಾಗಿ ಕ್ಷೇತ್ರದಲ್ಲಿನ ಕಾಂಗ್ರೆಸ್ ನಾಯಕರಿಗೆ ತೀವ್ರ ನೋವು ಉಂಟಾಗಿದೆ.