ಸೇತುವೆ ವಿಭಿನ್ನ ದಿಕ್ಕಿನಲ್ಲಿರುವ ಭೂಮಿಯನ್ನು ಸಂಪರ್ಕಿಸುತ್ತದೆ. ಇದು ಆರ್ಥಿಕತೆ ಮತ್ತು ಸಾರಿಗೆ ವ್ಯವಸ್ಥೆಯ ಮೈಲುಗಲ್ಲಾಗಿಯೂ ಕಾರ್ಯನಿರ್ವಹಿಸುತ್ತದೆ. ಜಗತ್ತಿನಲ್ಲಿ ಅನೇಕ ಭವ್ಯವಾದ ಮತ್ತು ಸುಂದರವಾದ ಸೇತುವೆಗಳಿವೆ. ಇವುಗಳಲ್ಲಿ ಕೆಲವು ಸೇತುವೆಗಳು ಬದಲಾಗುತ್ತವೆ, ಹಡಗುಗಳು ಮತ್ತು ದೋಣಿಗಳಿಗೆ ದಾರಿ ಮಾಡಿಕೊಡುತ್ತವೆ. ಪ್ರಪಂಚದ ಚಲಿಸಬಲ್ಲ ಸೇತುವೆಗಳ ಪಟ್ಟಿ ಇಲ್ಲಿದೆ.
ಟವರ್ ಸೇತುವೆ (ಲಂಡನ್)
ಟವರ್ ಸೇತುವೆಯನ್ನು ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನ ಗುರುತೆಂದು ಪರಿಗಣಿಸಲಾಗಿದೆ. ಇದನ್ನು ಥೇಮ್ಸ್ ನದಿಯ ಮೇಲೆ ನಿರ್ಮಿಸಲಾಗಿದೆ. 1886 ಮತ್ತು 1894 ರ ನಡುವೆ ಈ ಬ್ರಿಡ್ಜ್ ನಿರ್ಮಾಣವಾಗಿದೆ. ಬೋಟ್‌ಗೆ ದಾರಿ ಬಿಡಬೇಕಾದಾಗ ಸೇತುವೆಯ ಮೇಲೆ ಸಂಚಾರ ನಿಲ್ಲಿಸಿ ಮಧ್ಯದಿಂದ ತೆರೆಯಲಾಗುತ್ತದೆ. ಇಂತಹ ತಂತ್ರಜ್ಞಾನ ಜಗತ್ತಿನ ಹಲವು ದೇಶಗಳಲ್ಲಿದೆ.
ಪಂಬನ್ ಸೇತುವೆ (ರಾಮೇಶ್ವರಂ)
ಪಂಬನ್ ಸೇತುವೆಯು ರಾಮೇಶ್ವರಂ ದ್ವೀಪವನ್ನು ರೈಲಿನ ಮೂಲಕ ಭಾರತೀಯ ಭೂಭಾಗಕ್ಕೆ ಸಂಪರ್ಕಿಸುತ್ತದೆ, ಇದನ್ನು 1915 ರಲ್ಲಿ ನಿರ್ಮಿಸಲಾಯಿತು. ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾದ ಈ ಸೇತುವೆ ನಿಜಕ್ಕೂ ಜಗತ್ತಿನ ಅದ್ಭುತಗಳಲ್ಲೊಂದು. ಮಧ್ಯದಿಂದ ತೆರೆದು ದೋಣಿಗಳಿಗೆ ದಾರಿಮಾಡಿಕೊಡುವ ವ್ಯವಸ್ಥೆ ಇದರಲ್ಲಿದೆ. ಅದರ ಬದಿಗಳಲ್ಲಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿದ್ದು, 2022ರ ಡಿಸೆಂಬರ್‌ನಲ್ಲಿ ಅದನ್ನು ಸಂಪೂರ್ಣವಾಗಿ ಮುಚ್ಚಲಾಯಿತು.
ಪೋಂಟ್ ಜಾಕ್ಸ್ ಚಬನ್-ಡೆಲ್ಮಾಸ್ (ಫ್ರಾನ್ಸ್)
ಇದು ಫ್ರಾನ್ಸ್‌ನ ಬೋರ್ಡೆಕ್ಸ್ ನಗರದಲ್ಲಿರುವ ಲಂಬವಾದ ಲಿಫ್ಟ್ ಸೇತುವೆ. ಈ ಸೇತುವೆಯು ಗರೊನ್ನೆ ನದಿಯನ್ನು ದಾಟುತ್ತದೆ. 2013ರ ಮಾರ್ಚ್ ತಿಂಗಳಿನಲ್ಲಿ ಈ ಸೇತುವೆ ಉದ್ಘಾಟನೆಯಾಗಿದೆ.
ಹಾರ್ನ್ ಸೇತುವೆ (ಜರ್ಮನಿ)
ಜರ್ಮನಿಯ ಕೀಲ್ ನಗರದಲ್ಲಿ ನೆಲೆಗೊಂಡಿರುವ ಹಾರ್ನ್ ಸೇತುವೆ ಬಹಳ ಸುಂದರವಾಗಿದೆ. ವಿಶೇಷವೆಂದರೆ ಇದು ಇಂಗ್ಲಿಷ್ ಅಕ್ಷರದ N ಆಕಾರದಲ್ಲಿ 3 ವಿಭಾಗಗಳಲ್ಲಿ ತೆರೆಯುತ್ತದೆ. ಇದನ್ನು 1997ರಲ್ಲಿ ನಿರ್ಮಿಸಲಾಯಿತು. ಮಧ್ಯಮ ಗಾತ್ರದ ಹಡಗು ಅದರ ಕೆಳಗೆ ದಾಟಬಹುದು.
ಫೋರಿಡ್ ಹಾರ್ಬರ್ ಸೇತುವೆ (ವೇಲ್ಸ್)
ವೇಲ್ಸ್‌ನಲ್ಲಿರುವ ಫೋರಿಡ್ ಹಾರ್ಬರ್ ಸೇತುವೆಯನ್ನು ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳಿಗಾಗಿ ನಿರ್ಮಿಸಲಾಗಿದೆ. ಇದನ್ನು ಡ್ರ್ಯಾಗನ್ ಬ್ರಿಡ್ಜ್ ಎಂದೂ ಕರೆಯುತ್ತಾರೆ. ಇದು ದೋಣಿಗಳಿಗೆ ದಾರಿ ಮಾಡಿಕೊಡಲು ಇಂಗ್ಲಿಷ್ ಅಕ್ಷರ V ಮಾದರಿಯಲ್ಲಿ ತೆರೆದುಕೊಳ್ಳುತ್ತದೆ.