ಹಲ್ಲುಜ್ಜುವ ವೇಳೆ ಆಕಸ್ಮಿಕವಾಗಿ ಬ್ರಶ್ ಕಣ್ಣಿನ ಕೆಳಗೆ ಚುಚ್ಚಿಕೊಂಡ ಪ್ರಸಂಗವೊಂದು ನಡೆದಿದ್ದು, ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಟೂತ್ ಬ್ರಶ್ ತೆಗೆದಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ಹಿರೂರು ಗ್ರಾಮದ ಗೃಹಿಣಿ ವಿನೋದಾ ತಳವಾರ ಆಗಸ್ಟ್ 14ರಂದು ಮುಂಜಾನೆ ತನ್ನ ನಾಲ್ಕು ವರ್ಷದ ಮಗಳ ಹಲ್ಲುಜ್ಜುತ್ತಿದ್ದಾಗ, ಮಗು ತಮಾಷೆಯಾಗಿ ಬ್ರಷ್ ಅನ್ನು ದೂರ ತಳ್ಳಿದೆ, ಅದು ವಿನೋದಾ ಎಡಗಣ್ಣಿನ ಕೆಳಗೆ ಚುಚ್ಚಿತು. ಇಡೀ ಮನೆಯವರೆಲ್ಲ ಗಾಬರಿಬಿದ್ದು ಬ್ರಷ್ ಅನ್ನು ಎಚ್ಚರಿಕೆಯಿಂದ ಸರಿಸಲು ಪ್ರಯತ್ನಿಸಿದ್ದರು. ಆದರೆ, ಹಲ್ಲುಜ್ಜುವ ಬ್ರಷ್ ನಡುವೆ ಮುರಿದು ದೊಡ್ಡ ತುಂಡು ಮುಖದ ಮೇಲೆ ಇನ್ನೂ ಆಳವಾಗಿ ಅಂಟಿಕೊಂಡಿತ್ತು.
ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ ನಂತರ ಮಹಿಳೆಯನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕಿಯ ವಿಜ್ಞಾನ ಸಂಸ್ಥೆಗೆ (ಕಿಮ್ಸ್) ಸ್ಥಳಾಂತರಿಸಲಾಯಿತು. ಎಲ್ಲಾ ರೀತಿ ಪರಿಶೀಲನೆ ಬಳಿಕ ಘಟನೆ ನಡೆದ ಮೂರು ದಿನಗಳ ನಂತರ ಟೂತ್ ಬ್ರಷ್ನ ಮುರಿದ ತುಂಡನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ತೆಗೆದುಹಾಕಲಾಯಿತು.
ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ, ಒಂದು ಕಣ್ಣು ಶಾಶ್ವತವಾಗಿ ಕುರುಡಾಗಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ. ಮುಖದಲ್ಲಿ 7-8 ಸೆಂ.ಮೀ ಆಳವಾದ ಗಾಯದೊಂದಿಗೆ ಕಣ್ಣಿನ ಕೆಳಗೆ ಚುಚ್ಚಿದ ಪ್ಲಾಸ್ಟಿಕ್ ಟೂತ್ ಬ್ರಷ್ನ್ 7 ಸೆಂ.ಮೀ. ಮುರಿದ ತುಂಡನ್ನು ನಾವು ತೆಗೆದುಹಾಕಿದ್ದೇವೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಎಂದು ಕಿಮ್ಸ್ನ ತಜ್ಞ ವೈದ್ಯ ಡಾ. ಮಂಜುನಾಥ್ ವಿಜಾಪುರ ಹೇಳಿದರು.