ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ನಾವು ಬಳಸುವ ಟೂತ್ ಬ್ರಷ್ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸಲೇಬೇಕು. ಇಲ್ಲದೇ ಹೋದಲ್ಲಿ ಟೂತ್‌ಬ್ರಷ್‌ನಿಂದಲೇ ನಮಗೆ ಅನಾರೋಗ್ಯ ಬರಬಹುದು. ಹಲವಾರು ತಿಂಗಳುಗಳವರೆಗೆ ಸತತವಾಗಿ ಬಳಸಿದಾಗ ಟೂತ್‌ಬ್ರಷ್ ಕೂಡ ನಮಗೆ ಹಾನಿಕಾರಕವಾಗುತ್ತದೆ. ಈ ಹಲ್ಲುಜ್ಜುವ ಬ್ರಷ್‌ನಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಬ್ಯಾಕ್ಟೀರಿಯಾಗಳಿರುತ್ತವೆ.
ಈ ಬ್ಯಾಕ್ಟೀರಿಯಾಗಳು ಸುಮಾರು 70 ಪ್ರತಿಶತ ಟೂತ್ ಬ್ರಷ್‌ಗಳಲ್ಲಿ ಕಂಡುಬರುತ್ತವೆ. ಇದರಿಂದ ಬ್ಯಾಕ್ಟೀರಿಯಾ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಹಲ್ಲುಜ್ಜುವ ಬ್ರಷ್‌ಗಳನ್ನು ಸರಿಯಾಗಿ ಸಂಗ್ರಹಿಸಬೇಕು ಮತ್ತು ಸ್ವಚ್ಛಗೊಳಿಸಬೇಕು.
ಸಂಶೋಧನೆಯ ಪ್ರಕಾರ ಹಲ್ಲುಜ್ಜುವ ಬ್ರಷ್‌ಗಳಲ್ಲಿ ಎಸ್ಚೆರಿಚಿಯಾ ಕೋಲಿ ಅಂದರೆ ಇ.ಕೋಲಿ ಬ್ಯಾಕ್ಟೀರಿಯಾಗಳಿರುತ್ತವೆ. ಇದು ವಾಂತಿ ಮತ್ತು ಭೇದಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಚರ್ಮದ ಸೋಂಕನ್ನು ಉಂಟುಮಾಡುವ ಸ್ಟ್ಯಾಫಿಲೋಕೊಕಿಯ ಬ್ಯಾಕ್ಟೀರಿಯಾ ಕೂಡ ಬ್ರಷ್‌ನಲ್ಲಿರುವ ಸಾಧ್ಯತೆ ಇರುತ್ತದೆ. ತಜ್ಞರ ಪ್ರಕಾರ ಟೂತ್ ಬ್ರಷ್ ಅನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು.
ಮನೆಯಲ್ಲಿರುವವರೆಲ್ಲ ಒಂದೇ ಬಾತ್ರೂಮ್ ಅನ್ನು ಬಳಸಿದಾಗ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಟಾಯ್ಲೆಟ್ ಮುಚ್ಚದೇ ಫ್ಲಶ್ ಮಾಡುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಫ್ಲಶ್‌ನಿಂದ ಸಿಡಿಯುವ ಕೊಳಕು ನೀರಿನ ಹನಿಗಳು ಸ್ನಾನದ ಮನೆಯ ಗಾಳಿಯಲ್ಲಿ ಸೇರಿಕೊಂಡು ನಂತರ ಬ್ರಷ್‌ಗಳ ಮೇಲೆ ಕೂರಬಹುದು. ಇದರಿಂದ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿರುತ್ತದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಬದಲಾಯಿಸುವುದರ ಜೊತೆಗೆ ಇನ್ನೂ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಬ್ಯಾಕ್ಟೀರಿಯಾ ಸೋಂಕಿನಿಂದ ಪಾರಾಗಬಹುದು. ಹಲ್ಲುಜ್ಜುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಶೌಚಾಲಯದಿಂದ ಬ್ರಷ್ ಅನ್ನು ದೂರವಿಡಿ. ಟೂತ್ ಬ್ರಶ್ ಅನ್ನು ಹಾಸಿಗೆ ಅಥವಾ ಸೋಫಾ ಮೇಲೆ ಇಡಬೇಡಿ. ನಿಮ್ಮ ಬ್ರಷ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಪ್ರಯಾಣದ ಸಮಯದಲ್ಲಿ ಬ್ರಷ್ ಅನ್ನು ಮುಚ್ಚಿಡಿ. ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರ ಟೂತ್ಪೇಸ್ಟ್ ಅನ್ನು ಪ್ರತ್ಯೇಕವಾಗಿ ಇರಿಸಿ.
ಇನ್ನು ಹಲ್ಲುಜ್ಜುವ ಬ್ರಷ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಏಕೆಂದರೆ ಅದರ ಬಿರುಗೂದಲುಗಳಲ್ಲಿ ಕೊಳಕು ಅಡಗಿರುತ್ತದೆ. ಟೂತ್ ಬ್ರಷ್ ಅನ್ನು ಬಳಸುವ ಮೊದಲು ಮತ್ತು ನಂತರ ಸಾಮಾನ್ಯ ಅಥವಾ ಉಗುರುಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆಯಿರಿ. ಹಲ್ಲುಜ್ಜುವ ಬ್ರಷ್‌ನಿಂದ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಅಲ್ಕೋಹಾಲ್ ಅಥವಾ ವಿನೆಗರ್ ಹೊಂದಿರುವ ಮೌತ್‌ವಾಶ್‌ನಿಂದ ಅದನ್ನು ಸ್ವಚ್ಛಗೊಳಿಸಬಹುದು.