
ಮೇಕಪ್ ಮಾಡಲು ನೀಡಿದ ಸಮಯವನ್ನು ಜನರು ಮೇಕಪ್ ತೆಗೆಯಲು ನೀಡುವುದಿಲ್ಲ. ಅದೆಷ್ಟೋ ಜನ ರಾತ್ರಿ ವೇಳೆ ಸುಸ್ತಾಗಿ ಮೇಕಪ್ ತೆಗೆಯದೇ ಹಾಗೇ ಮಲಗ್ತಾರೆ. ಪ್ರತಿ ದಿನ ಹೀಗೆ ಮಾಡಿದ್ರೆ ಅನೇಕ ತ್ವಚೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಚರ್ಮಕ್ಕೆ ಹಾನಿಯಾಗುತ್ತದೆ.
ತಜ್ಞರ ಪ್ರಕಾರ, ರಾತ್ರಿ ಮೇಕಪ್ ತೆಗೆಯದೆ ಮಲಗಿದ್ರೆ, ಚರ್ಮ ಬೇಗ ವಯಸ್ಸಾದಂತೆ ಕಾಣುತ್ತದೆ. ಮೊಡವೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಮೇಕ್ಅಪ್ ಚರ್ಮದ ಮೇಲೆ ದೀರ್ಘಕಾಲ ಉಳಿದಿದ್ದರೆ, ಅದು ಚರ್ಮದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಚರ್ಮವು ಒಣಗಲು ಪ್ರಾರಂಭಿಸುತ್ತದೆ. ಕೆಲವೇ ದಿನಗಳಲ್ಲಿ ಮುಖದ ಮೇಲೆ ಫೈಲ್ ಲೈನ್ ಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಚರ್ಮದ ಕೋಶಗಳು ಹಾನಿಗೊಳಗಾಗಲು ಪ್ರಾರಂಭಿಸುತ್ತವೆ.
ಮೇಕಪ್ ಜೊತೆ ಮಲಗಿದಾಗ ಚರ್ಮದ ರಂಧ್ರಗಳು ಮುಚ್ಚಿಹೋಗುತ್ತವೆ. ಮೇಕ್ಅಪ್ ಉತ್ಪನ್ನಗಳಲ್ಲಿ ಸಿಲಿಕೋನ್ ಮತ್ತು ಇತರ ರಾಸಾಯನಿಕಗಳು ಇದಕ್ಕೆ ಕಾರಣ. ಕೆಲವು ಉತ್ಪನ್ನಗಳು ಚರ್ಮಕ್ಕೆ ಹಾನಿಕಾರಕವಾದ ಬಣ್ಣಗಳು ಮತ್ತು ಕೇಂದ್ರೀಕೃತ ಸುಗಂಧ ದ್ರವ್ಯಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ಕಲುಷಿತ ತೈಲ ಮತ್ತು ಕೊಳಕು, ಚರ್ಮದ ಮೇಲೆ ಸಂಗ್ರಹವಾಗುತ್ತದೆ. ರಂಧ್ರಗಳು ಮುಚ್ಚಿ ಹೋಗುತ್ತವೆ. ಅಲ್ಲಿ ಮೊಡವೆ ಶುರುವಾಗುತ್ತದೆ.
ಮುಖದ ಮೇಲೆ ತುಂಬಾ ಸಮಯ ಮೇಕ್ಅಪ್ ಇರುವುದ್ರಿಂದ ಚರ್ಮವು ಉಸಿರಾಡಲು ಸಾಧ್ಯವಾಗುವುದಿಲ್ಲ. ರಂಧ್ರಗಳು ಮುಚ್ಚಿ ಹೋಗುತ್ತವೆ. ಈ ಕಾರಣದಿಂದಾಗಿ ಚರ್ಮದ ನೈಸರ್ಗಿಕ ತೈಲಗಳು ಕಲುಷಿತಗೊಳ್ಳುತ್ತವೆ. ಚರ್ಮದಲ್ಲಿ ತೇವಾಂಶದ ಕೊರತೆ ಹೆಚ್ಚಾಗುತ್ತದೆ.
ಐಲೈನರ್, ಐಶ್ಯಾಡೋ, ಮಸ್ಕರಾ ಇತ್ಯಾದಿ ತೆಗೆಯದೆ ಮಲಗಿದರೆ ಅದು ರೆಪ್ಪೆಗೂದಲುಗಳಿಗೆ ಸಾಕಷ್ಟು ಹಾನಿ ಮಾಡುತ್ತದೆ. ಈ ಉತ್ಪನ್ನಗಳು ಕಣ್ಣುರೆಪ್ಪೆಗಳ ಸಣ್ಣ ರಂಧ್ರಗಳನ್ನು ಕಪ್ಪಾಗಿಸುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ಕಣ್ಣು ರೆಪ್ಪೆಗಳು ಉದುರಲು ಶುರುವಾಗುತ್ತವೆ.