
ಧಾರವಾಡ: ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ಯ ಮಾಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಮಾರು 70 ಸಾವಿರ ಜನ ಪಾಲ್ಗೊಳ್ಳುತ್ತಿರುವದರಿಂದ ಕಾರ್ಯಕ್ರಮ ಯಶಸ್ವಿಗಾಗಿ ಪ್ರತಿ ಸರ್ಕಾರಿ ನೌಕರ ಉಪಸ್ಥಿತರಿದ್ದು, ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಡಿಸಿ ಅನುಮತಿ ಇಲ್ಲದೆ ಯಾರೂ ರಜೆ ಹೋಗುವಂತಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶಿಸಿದರು.
ಅವರು, ಇಂದು ಸಂಜೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಸೆಪ್ಟೆಂಬರ್ 15ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ಯ ಮಾಡಿರುವ ಮಾನವ ಸರಪಳಿ ಕಾರ್ಯಕ್ರಮದ ಅಂತಿಮ ಸಿದ್ದತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪುರೇಷೆ ಮಾಡಲಾಗಿದೆ. ಮಾನವ ಸರಪಳಿ ರಚನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಆಗಿರುವುದರಿಂದ ಜಿಲ್ಲೆಯ ಪ್ರತಿಯೊಬ್ಬ ಸರ್ಕಾರಿ ನೌಕರನು ಕಡ್ಡಾಯವಾಗಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ಸೆಪ್ಟೆಂಬರ್ 14, 15 ಮತ್ತು 16 ರಂದು ಸಾರ್ವತ್ರಿಕ ರಜೆ ಇದೆ ಎಂದು ಮುಂಚಿತವಾಗಿ ಈಗಾಗಲೇ ಯಾವುದೇ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ರಜೆ ಹೋಗಿದ್ದರೆ ಆಯಾ ಇಲಾಖೆ ಮೇಲಾಧಿಕಾರಿ ತಕ್ಷಣ ತಮ್ಮ ಅಧಿಕಾರಿ, ಸಿಬ್ಬಂದಿಗಳ ರಜೆ ರದ್ದುಪಡಿಸಿ ಅವರು ಮರಳಿ ಕಚೇರಿಗೆ ಹಾಜರಾಗಲು ಸೂಚಿಸಬೇಕು. ಯಾರಿಗೆ ಆಗಲಿ, ರಜೆ ಅನಿವಾರ್ಯವಾಗಿ ಅಗತ್ಯವಿದ್ದರೆ ಅವರು ನೇರವಾಗಿ ಸ್ವತಃ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಸಂಪರ್ಕಿಸಿ, ಅನುಮತಿ ಪಡೆಯಬೇಕು. ಒಂದು ವೇಳೆ ಹಿರಿಯ ಅಧಿಕಾರಿ ಅನುಮತಿ ಮೇರೆಗೆ ಯಾರೇ ರಜೆ ಹೋಗಿದ್ದು ಕಂಡುಬಂದಲ್ಲಿ, ರಜೆ ಮಂಜೂರು ಮಾಡಿದ್ದ ಆಯಾ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಿ, ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಶಿಪಾರಸ್ಸು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆದ್ದರಿಂದ ಸೆ. 14 ಮತ್ತು 15 ರಂದು ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಮತ್ತು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳು ಯಾವುದೇ ರೀತಿಯಲ್ಲಿ ಕರ್ತವ್ಯ ಲೋಪವಾಗದಂತೆ ತಮಗೆ ವಹಿಸಿದ ಕಾರ್ಯ ನಿರ್ವಹಿಸಬೇಕು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ತೊಂದರೆಯಾದರೆ ಅಥವಾ ಅಗತ್ಯ ಮಾಹಿತಿ ಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರಂಭಸಿರುವ ಸಹಾಯವಾಣಿ: 0836 2233840 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಸೇರಿದಂತೆ ಮಾನವ ಸರಪಳಿಯ 55 ಕಿ ಮೀ ವ್ಯಶಪ್ತಿಯ 100 ಮೀಟರ್, 1000 ಮೀಟರ್, 1 ಕಿ.ಮೀ ಮತ್ತು 5 ಕಿ.ಮೀ ಗೆ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.