ಬೆಂಗಳೂರು: ಬೆಂಗಳೂರಿನ ಪಿಜಿಗಳಿಗೆ ಮಾರ್ಗಸೂಚಿ ಅಳವಡಿಕೆಗೆ ನಾಳೆಯೇ ಲಾಸ್ಟ್ ಡೇಟ್ ಆಗಿದ್ದು, ಇಲ್ಲದಿದ್ರೆ ಲೈಸೆನ್ಸ್ ರದ್ದಾಗುವ ಸಾಧ್ಯತೆಯಿದೆ.
ಹೌದು, ಪೇಯಿಂಗ್ ಗೆಸ್ಟ್(ಪಿಜಿ)ಗಳಿಗೆ ಈಗಾಗಲೇ ನೀಡಲಾದ ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 15ರೊಳಗೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬಿಬಿಎಂಪಿಯಿಂದ ನೀಡಲಾದ ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿ ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ. ಮಾರ್ಗಸೂಚಿಯ 10 ಅಂಶಗಳನ್ನು ಹೊಸದಾಗಿ ಆರಂಭಿಸುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಪಿಜಿಗಳು ಪಾಲಿಸಬೇಕು. ಮಾರ್ಗಸೂಚಿಗಳಲ್ಲಿ ತಿಳಿಸಿದಂತೆ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಪ್ರತಿ ನಿವಾಸಿಗೆ ವಾಸಕ್ಕೆ ತಲಾ 70 ಚದರ ಆಡಿ ಕನಿಷ್ಠ ಜಾಗ, ಸ್ವಚ್ಛತೆ, ನೈರ್ಮಲ್ಯತೆ ಹೊಂದಿರುವ ಸ್ನಾನ ಗೃಹಗಳು, ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ಸೌಲಭ್ಯ ಸೇರಿ ಮೊದಲಾದ ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 15ರೊಳಗೆ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಏನಿದೆ ಮಾರ್ಗಸೂಚಿಯಲ್ಲಿ..?
• ಪಿ.ಜಿ.ಗಳ ಪ್ರವೇಶ/ ನಿರ್ಗಮ ದ್ವಾರ ಮತ್ತು ಆವರಣದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. 90 ದಿನಗಳವರೆಗೆ ಬ್ಯಾಕ್ಅಪ್ ಹೊಂದಿರಬೇಕು.
• ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪಿ.ಜಿ.ಗಳಲ್ಲಿ ಪ್ರತಿಯೊಬ್ಬ ನಿವಾಸಿಗೆ 70 ಚದರ ಅಡಿ ಕನಿಷ್ಠ ಜಾಗವಿರಬೇಕು. ಕಟ್ಟಡದಲ್ಲಿ ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ದಿಷ್ಟ ಸ೦ಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿ ನೀಡಬೇಕು.
• ಪಿ.ಜಿ.ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೌಲಭ್ಯವಿರಬೇಕು.
• ಪಿ.ಜಿ.ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರಬೇಕು. ಪ್ರತಿಯೊಬ್ಬ ವಾಸಿಗೆ ಪ್ರತಿ ದಿನ 135 ಲೀಟರ್ ನೀರಿನ ಲಭ್ಯತೆ ಇರುವುದನ್ನು ಮಾಲೀಕರು / ಉದ್ದಿಮೆದಾರರು ಖಾತರಿಪಡಿಸಬೇಕು.
• ಪಿ.ಜಿ.ಗಳಲ್ಲಿ ಉದ್ದಿಮೆದಾರರು ತಮ್ಮದೇ ಅಡುಗೆ ಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ ಮೂರು ತಿಂಗಳೊಳಗೆ ಕಡ್ಡಾಯವಾಗಿ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದಿಂದ ಪರವಾನಗಿ ಪಡೆದುಕೊಳ್ಳಬೇಕು.
• ಪಿ.ಜಿ. ನಿವಾಸಿಗಳ ಸುರಕ್ಷತೆಗೆ ಕನಿಷ್ಠ ಒಬ್ಬ ಸಿಬ್ಬಂದಿಯನ್ನು 24 ಗಂಟೆಯೂ ನಿಯೋಜಿಸಿರಬೇಕು.
• ಪಿ.ಜಿ.ಗಳು ವಾಣಿಜ್ಯ ಪರವಾನಗಿ ಪತ್ರ ಪಡೆಯುವಾಗ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರುವ
ಬಗ್ಗೆ ಸಕ್ಷಮ ಪ್ರಾಧಿಕಾರದ ಅಧಿಕೃತ ಪ್ರಮಾಣ ಪತ್ರ ಸಲ್ಲಿಸಬೇಕು.
• ಪಿ.ಜಿ. ಕಟ್ಟಡದಲ್ಲಿ ಬಿಬಿಎಂಪಿ ಸಹಾಯವಾಣಿ 1533, ಪೊಲೀಸ್ ಇಲಾಖೆಯ ಸಹಾಯವಾಣಿ 101 ಫಲಕವನ್ನು ಪ್ರದರ್ಶಿಸಬೇಕು.
ಪಿ.ಜಿ.ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿಸಿರಬೇಕು.
• ಪಿ.ಜಿ.ಗಳ ಮಾಲೀಕರು ಘನತ್ಯಾಜ್ಯ ವಿಂಗಡಿಸಿ, ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಬೇಕು.
ನಗರದಲ್ಲಿ ಸುಮಾರು 2000 ಪಿಜಿಗಳಿಗೆ ಪರವಾನಿಗೆ ನೀಡಿದ್ದು, ಸೆಪ್ಟೆಂಬರ್ 16 ರಿಂದ ಬಿಬಿಎಂಪಿ ವಲಯ ಆರೋಗ್ಯ ಅಧಿಕಾರಿಗಳು, ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳಿಗೆ ನೀಡಲಾದ ಉದ್ದಿಮೆ ಪರವಾನಿಗೆ ರದ್ದುಪಡಿಸಲಿದ್ದಾರೆ .