ಅಕಾಲಿಕ ಮಳೆ ಮಾಡುತ್ತಿರುವ ಕಿತಾಪತಿಯಿಂದಾಗಿ ಗಗನ ಮುಟ್ಟಿರುವ ಟೊಮ್ಯಾಟೋ ಬೆಲೆಗಳು ಮುಂದಿನ ತಿಂಗಳು ಭೂಮಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಉತ್ತರ ಭಾರತದ ರಾಜ್ಯಗಳಿಂದ ಹೊಸ ಇಳುವರಿ ಲಭ್ಯವಿರುವ ಹಿನ್ನೆಲೆಯಲ್ಲಿ ಟೊಮ್ಯಾಟೋದ ಬೆಲೆಗಳು ಇಳಿಕೆಯಾಗಲಿವೆ ಎಂದು ಕೇಂದ್ರ ಆಶಿಸುತ್ತಿದೆ.
“ಡಿಸೆಂಬರ್‌ನಿಂದ ಉತ್ತರ ಭಾರತದ ರಾಜ್ಯಗಳಿಂದ ಟೊಮ್ಯಾಟೋ ಆಗಮನ ಆರಂಭವಾಗಲಿದ್ದು, ಲಭ್ಯತೆ ಹೆಚ್ಚಿಸಿ ಬೆಲೆಗಳಲ್ಲಿ ಇಳಿಕೆಯಾಗಲಿದೆ. ಕಳೆದ ವರ್ಷದ ಡಿಸೆಂಬರ್‌ನಷ್ಟೇ ಪ್ರಮಾಣದ ಟೊಮ್ಯಾಟೋ ಮುಂದಿನ ತಿಂಗಳೂ ಬರುವ ನಿರೀಕ್ಷೆ ಇದೆ,” ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ ಉಂಟಾದ ಬೆಳೆ ಹಾನಿಯಿಂದ ಸೆಪ್ಟೆಂಬರ್ ಅಂತ್ಯದಿಂದ ಟೊಮ್ಯಾಟೋ ಬೆಲೆಗಳಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ವಿವರಿಸಿದೆ.