ಚಾಮರಾಜನಗರ: ಟೊಮೆಟೊ ಬೆಳೆಗೆ ಬಂಗಾರದ ಬೆಲೆ ಬಂದಿದ್ದೇ ತಡ, ಹಲವೆಡೆ ಟೊಮೆಟೊ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಇನ್ನು ಕೆಲವೆಡೆ ಕುಟುಂಬಗಳ ದ್ವೇಷಾಗ್ನಿಗೆ ಟೊಮೆಟೊ ಬೆಳೆಯೇ ನಾಶವಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ.
ಚಾಮರಾಜನಗರದ ಕೆಬ್ಬೇಪುರ ಗ್ರಾಮದಲ್ಲಿ ದುಷ್ಕರ್ಮಿಗಳು ಟೊಮೆಟೊ ತೋಟಕ್ಕೆ ನುಗ್ಗಿ ಟೊಮೆಟೊ ಬೆಳೆ ನಾಶ ಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಶ್ವಾನ ದಳ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಂಡಿದೆ.
ರೈತ ಮಂಜುನಾಥ್ ಎಂಬುವವರು ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದು ಒಂದೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. ಸಮೃದ್ಧವಾಗಿ ಬೆಳೆದು ನಿಂತಿದ್ದ ಟೊಮೆಟೊ ಇನ್ನೇನು ವಾರದಲ್ಲಿ ಕಟಾವ್ ಗೆ ಸಿದ್ಧವಾಗಿತ್ತು. ಈ ಬಾರಿ ಟೊಮೆಟೊ ಬೆಲೆ ಹೆಚ್ಚಾಗಿದ್ದರಿಂದ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತ ಮಂಜುನಾಥ್ ಗೆ ಆಘಾತವಾಗಿದೆ. ತಡರಾತ್ರಿ ದುಷ್ಕರ್ಮಿಗಳು ಟೊಮೆಟೊ ತೋಟಕ್ಕೆ ನುಗ್ಗಿ ಟೊಮೆಟೊವನ್ನೆಲ್ಲ ಕಿತ್ತು ಬಿಸಾಕಿದ್ದಾರೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿರುವ ರೈತ ಮಜುನಾಥ್, ತೋಟದಲ್ಲಿಯೇ ಬಿದ್ದು ಗೋಳಾಡಿದ್ದಾರೆ.
ದ್ವೇಷಕ್ಕಾಗಿ ದುಷ್ಕರ್ಮಿಗಳು ಟೊಮೆಟೊ ಬೆಳೆ ನಾಶ ಮಾಡಿದ್ದಾರೆ. ಜಮೀನು ಮಾರಿ ಸಾಲ ತೀರಿಸಬೇಕು ಇಲ್ಲವಾದರೆ ತಾನು ನೇಣಿಗೆ ಕೊರಳೊಡ್ಡಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಟೊಮೆಟೊ ಬೆಳೆ ನಾಶ ಮಾಡಿರುವವರನ್ನು ಪತ್ತೆ ಮಾಡಿ ನ್ಯಾಯ ಕೊಡಿಸಿ ಎಂದು ಗೋಗರೆದಿದ್ದಾರೆ. ಇದೀಗ ಟೊಮೆಟೊ ತೋಟಕ್ಕೆ ಶ್ವಾನ ದಳದೊಂದಿಗೆ ಭೇಟಿ ನೀಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.