
ಬೆಳಗಾವಿ: ಟೋಲ್ ಗಳ ಸಮೀಪ ಫಾಸ್ಟ್ ಟ್ಯಾಗ್, ಮೂಲಸೌಕರ್ಯ, 100 ಕಿಲೋಮೀಟರ್ ಮಿತಿಯೊಳಗೆ ಮೂರು ಟೋಲ್ ಮೊದಲಾದ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಶೀಘ್ರವೇ ಜಂಟಿ ಸಭೆ ನಡೆಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಜಿಪಿಎಸ್ ಮೂಲಕ ಟೋಲ್ ಸಂಗ್ರಹ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ದೇಶಾದ್ಯಂತ ಹಂತಹಂತವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೆ.ಆರ್.ಡಿ.ಸಿ.ಎಲ್.ನಿಂದ ಹಾಲಿ ಟೋಲ್ ರಸ್ತೆಗಳಲ್ಲಿ ಫಾಸ್ಟ್ ಟ್ಯಾಗ್ ಮೂಲಕ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ದೂರಕ್ಕೆ ಅನುಗುಣವಾಗಿ ಟೋಲ್ ಸಂಗ್ರಹಿಸುವ ಯಾವುದೇ ಪ್ರಸ್ತಾವನೆ ಇಲ್ಲ. 100 ಕಿಲೋಮೀಟರ್ ಮಿತಿಯೊಳಗೆ 3 ಟೋಲ್, ಫಾಸ್ಟ್ ಟ್ಯಾಗ್ ಸೇರಿ ಇತರೆ ಸಮಸ್ಯೆಗಳ ಬಗ್ಗೆ ಎನ್.ಹೆಚ್.ಎ.ಐ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ.